ಮೈಸೂರು -ನಗರದ ಲಕ್ಷೀಪುರಂನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿಂದು ಪಶ್ಚಿಮ ಬಂಗಾಳದ ಅತಿ ಚಿಕ್ಕ ವಯಸ್ಸಿನಲ್ಲೇ ಬೋಧನೆಯಲ್ಲಿ ತೊಡಗಿಸಿಕೊಂಡ ಶಿಕ್ಷಣ ತಜ್ಞ ಬಾಬರ್ ಆಲಿ ಅವರೊಂದಿಗೆ ಶಿಕ್ಷಣ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಾಬರ್ ಆಲಿಯವರು ಮಕ್ಕಳನ್ನುದ್ದೇಶಿಸಿ, ಮಾತನಾಡಿ, ಶಿಕ್ಷಣದ ಮೂಲ ಉದ್ದೇಶ ಜ್ಞಾನವನ್ನು ಪಡೆಯುವುದು, ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ, ಸುಜ್ಞಾನದ ಬೆಳಕನ್ನು ಪಡೆಯವುದೇ ಶಿಕ್ಷಣದ ಮೂಲ ಉದ್ದೇಶ. ವಿದ್ಯಾರ್ಥಿಗಳು ಇಂದು ಶಿಸ್ತು, ಸಂಯಮವನ್ನು ಮೈಗೂಡಿಸಿಕೊಳ್ಳಬೇಕು. ಶಿಕ್ಷಣದ ಜೊತೆಗೆ ನೈತಿಕತೆಯನ್ನು ಬೆಳೆಸಿಕೊಂಡಾಗ ಜೀವನದಲ್ಲಿ ಆದರ್ಶ ವ್ಯಕ್ತಿಗಳಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ. ನಾನೂ ಕೂಡ ಬಡತನದಲ್ಲಿ ಬೆಳೆದಿದ್ದರೂ, ಶಿಕ್ಷಣದಿಂದ ವಂಚಿತರಾದವರಿಗೆ ಉಚಿತ ಶಿಕ್ಷಣವನ್ನು ನೀಡುತ್ತಾ ಬಂದಿದ್ದೇನೆ. ಬೆಲೆ ಕಟ್ಟಲಾಗದ ಯಾವುದಾದರೂ ಕ್ಷೇತ್ರವಿದ್ದರು ಅದು ಪವಿತ್ರವಾದ ಶಿಕ್ಷಣ ಕ್ಷೇತ್ರ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಗಮನವನ್ನು ಹರಿಸಬೇಕೆಂದು ತಿಳಿಸಿದರು.
ವೇದಿಕೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಉಪನ್ಯಾಸಕ ಎನ್.ಎಸ್.ಪಶುಪತಿಯವರು ಶಿಕ್ಷಣ ತಜ್ಞರಾದ ಬಾಬರ್ ಆಲಿ ಸಾಮಾನ್ಯರಲ್ಲಿ ಅಸಾಮಾನ್ಯ ವ್ಯಕ್ತಿ. ತಾನು ಕಷ್ಟಪಟ್ಟು ಕಲಿತ ವಿದ್ಯೆಯನ್ನು ಇನ್ನೊಬ್ಬರಿಗೂ ಸಹಾಯವಾಗಿ ಅವರೂ ಜೀವನದಲ್ಲಿ ಮುಂದೆ ಬರಲೆಂದು ಉಚಿತವಾಗಿ ಶಿಕ್ಷಣವನ್ನು ನೀಡುತ್ತಾ ಬಂದಿದ್ದಾರೆ. ಇವರು ತಮ್ಮ ೯ನೇ ವಯಸ್ಸಿನಲ್ಲಿಯೇ ಬೋಧನೆಯನ್ನು ಪ್ರಾರಂಭಿಸಿ, ೧೬ನೇ ವಯಸ್ಸಿನಲ್ಲಿ ೮೦೦ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿರುವುದನ್ನು ಪ್ರಚಲಿತ ವಿದ್ಯಮಾನಗಳಲ್ಲಿ ಕಾಣುತ್ತಿದ್ದೇವೆ, ಇದು ಶ್ಲಾಘನೀಯವಾದ ವಿಚಾರ. ಇಂತಹವರ ಬದುಕು ನಮಗೆಲ್ಲರಿಗೂ ಸ್ಪೂರ್ತಿದಾಯಕ ಎಂದು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕರಾದ ಎನ್.ಎಸ್.ಪಶುಪತಿ, ಮಹದೇವ ನಾಯಕ, ಡಾ.ಜಯಾನಂದ ಪ್ರಸಾದ್, ಶಶಿಕಲಾ, ಮಂಜುಳ, ಬೇಬಿ, ನಂದೀಶ್, ಶಶಿರೇಖಾ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಾಲೇಜಿನ ವತಿಯಿಂದ ಶಿಕ್ಷಣ ತಜ್ಞ ಬಾಬರ್ ಆಲಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.