ಧಾರವಾಡ: ಬಾಲ್ಯದಿಂದಲೇ ಜೀವನದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿ ತಮ್ಮ ಇಡೀ ಜೀವನವನ್ನೇ ಬಡ ಮಕ್ಕಳ ಶಿಕ್ಷಣ ಕಲಿಕೆಗಾಗಿ ಸಮರ್ಪಿಸಿದ ಅಪರೂಪದ ಅಕ್ಷರಮಾತೆ ಲೂಸಿ ಸಾಲ್ಡಾನಾ ಅವರ ಬದುಕು ಪ್ರತಿಯೊಬ್ಬರಿಗೂ ಮಾದರಿಯಾಗಿದೆ.ಒಂದು ಮಠದ ಕಾರ್ಯಕ್ರಮದಲ್ಲಿ ಯಾವ ರೀತಿ ಸದ್ಭಕ್ತರು ತನು ಮನ ಧನದಿಂದ ಸೇವೆಗೈಯುವರೋ ಅದೇ ರೀತಿ ಲೂಸಿ ಸಾಲ್ಡಾನಾ ಗುರುಮಾತೆಯ ಶಿಷ್ಯರು ತಮ್ಮ ಗುರುವಿನ ಕುರಿತು ಕಾರ್ಯಕ್ರಮದಲ್ಲಿ ತನು ಮನ ಧನದಿಂದ ಕಾರ್ಯಕ್ರಮ ಪ್ರತಿವರ್ಷ ಆಯೋಜಿಸುತ್ತ ಬರುತ್ತಿರುವುದು ಶ್ಲಾಘನೀಯ. ಎಂದು ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಮಹಾಸ್ವಾಮೀಜಿ ಹೇಳಿದರು.
ಅವರು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಅಕ್ಷರತಾಯಿ ಲೂಸಿ ಸಾಲ್ಡಾನಾ ಸೇವಾ ಸಂಸ್ಥೆ ಹಾಗೂ ನವರಸ ಸ್ನೇಹಿತರ ವೇದಿಕೆ ಧಾರವಾಡ ಇವರ ಸಹಯೋಗದಲ್ಲಿ ಶುಕ್ರವಾರದಂದು ಜರುಗಿದ ಲೂಸಿ ಸಾಲ್ಡಾನಾ ಅವರ ಜೀವನಾಧಾರಿತ ‘ಬದುಕು ಬಂಡಿ’ ಚಲನಚಿತ್ರದ ಟೀಸರ್ ಬಿಡುಗಡೆ, ವೈ.ಬಿ.ಕಡಕೋಳ ಸಂಪಾದಿಸಿದ ಲೂಸಿ ಸಾಲ್ಡಾನಾ ಗುರುಮಾತೆಯವರ ಸಂಗ್ರಹದ ಮನೆಮದ್ದು ಪುಸ್ತಕ ಲೋಕಾರ್ಪಣೆ, ಶ್ರಮಿಕರತ್ನ ಹಾಗೂ ಶಿಕ್ಷಕರತ್ನ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದರು.
ತಮ್ಮ ಶಿಕ್ಷಕ ವೃತ್ತಿಯಲ್ಲಿ ಬಂದ ಸಂಬಳದ ಹಣ ಹಾಗೂ ನಿವೃತ್ತಿಯ ನಂತರ ಬಂದ ಎಲ್ಲ ಹಣ ಮತ್ತು ಪಿಂಚಣಿ ಹಣವು ಸೇರಿದಂತೆ ಇಲ್ಲಿಯವರಗೆ ಒಟ್ಟು 25 ಲಕ್ಷ ರೂ.ಗಳನ್ನು 78 ಸರಕಾರಿ ಶಾಲೆಗಳ ಬಡ ಮಕ್ಕಳ ಕಲಿಕೆಗಾಗಿ ದತ್ತಿಹಣ ನೀಡಿದ ದತ್ತಿದಾನಿ ಲೂಸಿ ಸಾಲ್ಡಾನಾ ಬಡಮಕ್ಕಳ ಬಾಳಿಗೆ ದಾರಿ ದೀಪವಾಗಿದ್ದಾರೆ ಎಂದರು.
ಮಕ್ಕಳ ಸಾಹಿತಿ ಶಂಕರ ಹಲಗತ್ತಿ ಚಲನಚಿತ್ರ ಟೀಸರ್ ಬಿಡುಗಡೆ ಮಾಡಿ ಮಾತನಾಡಿ, ಈಗಿನ ಕಾಲದಲ್ಲಿಯೂ ನಮ್ಮ ನಿಮ್ಮೆಲ್ಲರ ನಡುವೆ ಇಂತಹ ನಿಸ್ವಾರ್ಥ ಸಮಾಜ ಸೇವೆ ಮಾಡುವವರಿದ್ದಾರೆ ಎಂಬುದೇ ನಮೆಗೆಲ್ಲಾ ಹೆಮ್ಮೆಯ ವಿಷಯ ಲೂಸಿ ಸಾಲ್ಡಾನಾ ಇವರ ಬದುಕು ಇತರರಗೆ ಸ್ಫೂರ್ತಿದಾಯಕ ಬದುಕಾಗಿದೆ ಎಂದು ಹೇಳಿದರು.
ದತ್ತಿದಾನಿ ಲೂಸಿ ಸಾಲ್ಡಾನಾ ಅಧ್ಯಕ್ಷತೆ ವಹಿಸಿದ್ದರು, ಅಪರ ಆಯುಕ್ತ ಕಚೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ವಿದ್ಯಾ ನಾಡಿಗೇರ ಮನೆ ಮದ್ದು ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತ ನಮ್ಮ ನಿಮ್ಮ ನಡುವೆ ಆದರ್ಶದ ಮಾತೆಯಾಗಿ ಲೂಸಿ ಸಾಲ್ಡಾನಾ ಇದ್ದಾರೆ. ನಿವೃತ್ತಿಯಾದರೂ ಕೂಡ ಇಂದಿಗೂ ಶಾಲೆಗೆ ಹೋಗಿ ಪಾಠಬೋಧನೆ ಮಾಡುವವರು ತುಂಬ ವಿರಳ ಅಂತಹವರಲ್ಲಿ ಲೂಸಿ ಸಾಲ್ಡಾನಾ ಮಾದರಿ ಎಂದು ನುಡಿದರು,
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕಿ ಡಾ.ರೇಣುಕಾ ಅಮಲಝರಿ,ಮಾತನಾಡುತ್ತ ಈ ದಿನ ಲೂಸಿ ಸಾಲ್ಡಾನಾ ಶಿಷ್ಯಬಳಗದಲ್ಲಿ ಬಹುಪಾಲು ಶಿಕ್ಷಕರಿದ್ದಾರೆ.ಇನ್ನುಳಿದ ಬೇರೆ ಬೇರೆ ಕರ್ತವ್ಯ ನಿರ್ವಹಿಸುವವರು ಕೂಡ ಇದರಲ್ಲಿ ಪಾಲ್ಗೊಂಡು ಗುರುವಿನ ಸೇವೆ ಮಾಡುತ್ತಿದ್ದು ಗುರುವಿನ ಹೆಸರಿನಲ್ಲಿ ಸಂಸ್ಥೆ ಸ್ಥಾಪಿಸಿದ್ದು ಇನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ರಚನಾತ್ಮಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಮೂಲಕ ಗುರುವಿನ ಹೆಸರಿಗೆ ತಮ್ಮ ಗುರುಕಾಣಿಕೆಯನ್ನು ನೀಡಲು ಕಂಕಣಬದ್ಧರಾಗಿರುವುದು ನಿಜಕ್ಕೂ ಅಭಿನಂದನಾರ್ಹ ಇಂತಹ ಶಿಷ್ಯ ಬಳಗ ಪಡೆದ ಲೂಸಿ ಸಾಲ್ಡಾನಾ ಗುರುಮಾತೆ ನಿಜಕ್ಕೂ ಅಭಿನಂದನಾರ್ಹರು ಎಂದರು.
ಜಿ.ಬಿ.ಶೆಟ್ಟರ ಸರಕಾರಿ ಶಾಲೆಗಳ ಬಲವರ್ಧನೆ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುತ್ತ, ಲೂಸಿ ಸಾಲ್ಡಾನಾ ಗುರುಮಾತೆಯವರ ಬದುಕು ಕತೆಯಲ್ಲ ಜೀವನ ಕೃತಿಯಾಗಿ ಅವರ ನುಡಿಮುತ್ತುಗಳು ಅಮೃತಧಾರೆಯಾಗಿ,ಕವನಗಳು ಒಂಟಿ ಪಯಣವಾಗಿ ನನ್ನ ಸಂಪಾದಕತ್ವದಲ್ಲಿ ಕೃತಿಗಳಾಗಿ ಮೂಡಿ ಬಂದಿದ್ದು ಮುಂದಿನ ಕೃತಿ ಗುರುಮಾತೆಯವರ ವಚನಗಳು ಮೂಡಿ ಬರಲಿದೆ.ಇವರ ನೆನಪನ್ನು ಯಾವತ್ತೂ ಪ್ರಶಸ್ತಿ ಬಯಸದ ಶಿಕ್ಷಕರು ಸಮಾಜದ ವಿವಿಧ ಸ್ಥರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರಮಿಕರನ್ನು ಯಾವುದೇ ಶಿಫಾರಸು,ಅರ್ಜಿ ಪಡೆಯದೇ ಸಂಘಟನೆಯ ಪದಾಧಿಕಾರಿಗಳೇ ಗುರುತಿಸುವ ಮೂಲಕ ಶ್ರಮಿಕರತ್ನ ಹಾಗೂ ಶಿಕ್ಷಕರತ್ನ ಪ್ರಶಸ್ತಿಗೆ ಆಯ್ಕೆ ಮಾಡುತ್ತಿರುವುದು ಅಭಿನಂದನಾರ್ಹ ಎಂದು ನುಡಿದರು.
ಬದುಕು ಬಂಡಿ ಸಹನಿರ್ದೇಶಕ ನಂದಕುಮಾರ ದ್ಯಾಂಪುರ ಇದೇ ಸಂದರ್ಭದಲ್ಲಿ ಈ ಚಲನಚಿತ್ರದಲ್ಲಿ ಅಭಿನಯಿಸಿದ ಎಲ್ಲ ಕಲಾವಿದರನ್ನು ವೇದಿಕೆಗೆ ಕರೆಯುವ ಮೂಲಕ ಕಲಾವಿದರನ್ನು ಗೌರವಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಲೂಸಿ ಸಾಲ್ಡಾನಾ ಗುರುಮಾತೆ ಮಾತನಾಡಿ, ನನ್ನ ಬದುಕಿನಲ್ಲಿ ಬಾಲ್ಯದಿಂದ ಹಿಡಿದು ರೈಲು ನಿಲ್ದಾಣದಲ್ಲಿ ತಂದೆ ತಾಯಿಯ ಅಗಲಿಕೆಯಿಂದ ಹಿಡಿದು ನನ್ನನ್ನು ಜೋಪಾನ ಮಾಡಿದ ಮಹನೀಯರನ್ನು ಮರೆಯಲಾರೆ.ನನ್ನನ್ನು ವಿದ್ಯಾಭ್ಯಾಸ ಮಾಡಿಸಿ ಶಿಕ್ಷಕ ವೃತ್ತಿಗೆ ಅಣಿಗೊಳಿಸಿದ ಕುಟುಂಬದ ಹಿರಿಯರನ್ನು ಮರೆಯಲಾರೆ ನನ್ನ ವಿದ್ಯಾರ್ಥಿ ಎಲ್.ಐ.ಲಕ್ಕಮ್ಮನವರ ನನ್ನ ಬದುಕಿನ ಕತೆಯನ್ನು ವೈ.ಬಿ.ಕಡಕೋಳ ಶಿಕ್ಷಕರ ಮೂಲಕ ಕತೆಯಲ್ಲ ಜೀವನ ಕೃತಿ ಹೊರತರುವ ಮೂಲಕ ನನಗೊಂದು ಹೊಸ ಚೇತನ ನೀಡಿದರು.ಅದು ಈಗ ಸಿನಿಮಾ ಆಗಿದೆ.ಒಳ್ಳೆಯ ರೀತಿಯಲ್ಲಿ ಚಿತ್ರೀಕರಣ ಮಾಡಿದ ಬಾಬಾಜಾನ್ ಮುಲ್ಲಾ ಮತ್ತು ಅವರ ಸಂಗಡಿಗರು ಉತ್ತಮ ಕಾರ್ಯ ಮಾಡಿದ್ದಾರೆ ಎಲ್ಲರಿಗೂ ಕೃತಜ್ಞತೆಗಳು ಎಂದು ಮಾತನಾಡಿದರು.
ನಂತರ ಶ್ರಮಿಕರತ್ನ ಹಾಗೂ ಶಿಕ್ಷಕರತ್ನ ಪ್ರಶಸಿ ಪ್ರದಾನ ಮಾಡಲಾಯಿತು. ಅಲ್ಲದೇ ಧಾರವಾಡ ತಾಲೂಕಿನ ಉತ್ತಮ ನಲಿಕಲಿ ಶಿಕ್ಷಕ ಶಿಕ್ಷಕಿಯರಿಯನ್ನು ಕೂಡ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಮಡೊಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಆಕರ್ಷಕ ಮಲ್ಲಗಂಭ ಪ್ರದರ್ಶನ ಹಾಗೂ ಕನ್ನಡ ಕೋಗಿಲೆ ಖ್ಯಾತಿಯ ಕುಮಾರಿ ಅನನ್ಯಾ ಪಾಟೀಲ ಅವರಿಂದ ಸುಮಧುರ ಸಂಗೀತ ಸೇವೆ ಜರುಗಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಗುರು ತಿಗಡಿ, ಅಶೋಕ ಸಜ್ಜನ, ವಾಯ್.ಬಿ.ಕಡಕೋಳ, ಎಸ್.ವೈ.ಸೊರಟಿ, ಲತಾ ಮುಳ್ಳೂರ, ಎಲ್.ಆಯ್,ಲಕ್ಕಮ್ಮನವರ, ಭೀಮಪ್ಪ ಕಾಸಾಯಿ, ಬಾಬಾಜಾನ ಮುಲ್ಲಾ, ನಂದಕುಮಾರ ದ್ಯಾಂಪೂರ, ಅಜಿತಸಿಂಗ್ ರಜಪೂತ, ಚಂದ್ರಶೇಖರ ತಿಗಡಿ, ರಾಜೀವಸಿಂಗ್ ಹಲವಾಯಿ, ಆರ್.ಎಂ.ಕುರ್ಲಿ, ಅಕ್ಬರಲಿ ಸೋಲಾಪೂರ, ರೇಣುಕಾ ಸರಾವರಿ.ಎಂ.ಡಿ.ಹೊಸಮನಿ.ಅಳ್ನಾವರ ಚರ್ಚನ ಮೈಕಲ್ ಸೋಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಎಲ್.ಐ.ಲಕ್ಕಮ್ಮನವರ ಸ್ವಾಗತಿಸಿದರು. ಆರ್.ಎಂ.ಕುರ್ಲಿ ನಿರೂಪಿಸಿದರು.