ಮನಸಿನ ಮಾತುಗಳ ಪಿಸುಮಾತಾಡುವ ಮಂಜುನಾಥ ಮೆಣಸಿನಕಾಯಿ

Must Read

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...

ಪ್ರಕೃತಿಯೇ ನಿಜವಾದ ದೇವರು – ಶಾಂತ ಗಂಗಾಧರ ಶ್ರೀಗಳು

ಸಿಂದಗಿ: ಪ್ರಕೃತಿಯೇ ನಿಜವಾದ ದೇವರು ನಿಸರ್ಗವೇ ಕೂಡಲ ಸಂಗಮ ಎಂದು ಹೇಳಿದ ಬಸವಣ್ಣನವರ ಹಾಗೂ ಶರಣೆ ಮಾತುಗಳು ಅಕ್ಷರಶಃ ಪ್ರಸ್ತುತವಾಗಿವೆ. ಎಂದು ಪಟ್ಟಣದ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ...

ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರ ಪಾತ್ರ ಕುರಿತು ಪ್ರವಚನ

ಸಿಂದಗಿ: ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯ ಭಂಡಾರವೇ ಅಡಗಿರುತ್ತದೆ ಅದನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಮಾತ್ರ ಸಂಗ್ರಹ ಮಾಡುವ ಧ್ಯೇಯ ಇರುತ್ತದೆ ಅಂಥವರ ಸಾಲಿನಲ್ಲಿ ಶ್ರೀ ಶಾಂತಗಂಗಾಧರ...

ಕನ್ನಡ ಸಾರಸ್ವತ ಲೋಕದಲ್ಲಿ ಕವಿಯನ್ನು ವಯಸ್ಸು, ಹುದ್ದೆಗಳಿಂದ ಅಳೆಯಲಾಗದು. ಕವಿಯನ್ನು ಕಾವ್ಯ, ಭಾವದಿಂದ, ಕಲ್ಪನಾ ರಚಿತ ಕಾವ್ಯಶಕ್ತಿ, ಸಾಹಿತ್ಯದ ಗಟ್ಟಿತನ, ಕವನಗಳ ಅಂತಃಶಕ್ತಿ, ಕವಿಯ ಚಾರಿತ್ರ್ಯ, ಬರಹ ಬದುಕಿನ ಸಂಬಂಧ, ಶಿಕ್ಷಣ, ಸಮಾಜ, ಸಂಘಟನೆಗಳಿಗೆ ಕವಿಯ ಕೊಡುಗೆ, ಜಗದಲಿ ತಾನಿದ್ದು ಜಗದಗಲದ ತಾಕಿ೯ಕ, ಮಾಮಿ೯ಕ, ಬದಲಾವಣೆಗಳಲ್ಲಿ ಕವಿಯ ಪ್ರಯತ್ನಗಳು, ಕವಿಯ ನಡಾವಳಿಕೆಗಳೊಂದಿಗೆ, ಸ್ತ್ರೀ ಸಮ್ಮಾನ, ಸಹಕಾರ, ಪರೋಪಕಾರ, ಆತ್ಮಿಯತೆ, ಗೌರವ, ನನ್ನತನವನ್ನು ಧಾರೆ ಎರೆಯುವ ಧಾರಾಳತನ, ಮಿತಭಾಷೆ, ನಾಡು ನುಡಿಯ ಪ್ರೇಮ, ಜಗದ ಕಂಟಕಗಳನ್ನು ತನ್ನ ಸಂಕಟಗಳೆಂದು ಮುಂದಾಳುತನದಿಂದ ಭಯವಿಲ್ಲದೆ ಎದೆಯೊಡ್ಡಿ ಜಯವನ್ನು ಹೆಕ್ಕಿ ಜಯದ ಶ್ರೇಯಸ್ಸು ಇನ್ನೊಬ್ಬರಿಗೆ ನೀಡುವವ, ಪರಿಸರದಲಿ ತಾನಿದ್ದು ರಸಋಷಿಯಂತೆ ವಿರಮಿಸದೆ ಕಸದಲ್ಲೂ ಹೊಸದನ್ನು ಸಂಶೋಧಿಸುವ ಕವಿ, ಸ್ವಾಥ೯ತೆಗೆ ನೀರು ಹಾಕಿ ನಿಸ್ವಾರ್ಥತೆಗೆ ನಿತ್ಯ ನಾಂದಿ ಹಾಡುತ, ನಿಂತ ನೀರಾಗದೆ ಸದಾ ಹರಿಯುತ ಏರಿಗೂ ಈಜುವವನು ಕವಿ. ಕವಿ ಸಮಾಜಕ್ಕೆ ಒಬ್ಬ ಮಾದರಿ ವ್ಯಕ್ತಿ. ಕವಿಯ ಬರಹವಷ್ಟೆ ಅಲ್ಲದೆ ಅವನ ಬದುಕು ಸಮಾಜಕ್ಕೆ ಒಂದು ಪಾಠವಾದೀತು. ನಮ್ಮ ಕರುನಾಡಲ್ಲಿ ಸವ೯ ಸಂಪನ್ನ ಕವಿಗಳಿದ್ದು ನಮ್ಮ ದೇಶಕ್ಕಷ್ಟೆ ಅಲ್ಲದೆ ಇಡೀ ಜಗತ್ತಿಗೆ ತಮ್ಮ ಜ್ಞಾನದ ಅರಿವನ್ನು ಪೀಠಗಳಿಂದ ತೋರಿಸಿದ್ದಾರೆ.

ಆತ್ಮೀಯ ಓದುಗ ಮಿತ್ರರೆ ಇಂದು “ಮನಸ್ಸಿನ ಮಾತು” ಎಂಬ ಕವನ ಸಂಕಲನವನ್ನು ರಚಿಸಿ ಕನ್ನಡ ತಾಯಿಯ ಪಾದದಡಿ ಇಟ್ಟು ಪ್ರತಿ ಕನ್ನಡಿಗರ ಮನ ಮನೆಗಳಿಗೆ ತಮ್ಮ ಬರಹದ ಕಾವ್ಯಶಕ್ತಿಯನ್ನು ಕರುಣಾ ಭಾವದಿಂದ, ತಮ್ಮ ಮನದಾಳದಲ್ಲಿ ಸದಾ ಕೋಲಾಹಲ ಏಳುವ ಅಲೆಗಳ ಪ್ರತಿ ಶಬ್ದಗಳನ್ನು ಜೋಡಿಸಿ, ತಮ್ಮ ಮನದಂತರಾಳದಲ್ಲಿ ಬೀಳುವ ಉಲ್ಕಾಪಾತದ ಉಲ್ಕೆಗಳನ್ನು ಆಯಿಸಿ ಚಿಕ್ಕ ವಯಸ್ಸಿನಲ್ಲಿ ಚೊಕ್ಕದಾಗಿ ಕವನಗಳ ರಚಿಸಿ, ನಾಡಿನಾದ್ಯಂತ ಹಿರಿಕಿರಿ ಕವಿಗಳೊಂದಿಗೆ ಸಂಪರ್ಕದಲ್ಲಿದ್ದು ಅವರೆಲ್ಲರ ಹರಕೆ-ಆಶಿವಾ೯ದಗಳೊಂದಿಗೆ ತಮ್ಮ “ಮನಸ್ಸಿನ ಮಾತು” ಹೇಳಲು ತಯಾರಾಗಿದ್ದಾರೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯಲವಾಳ ಎಂಬ ಚಿಕ್ಕ ಹಳ್ಳಿಯ ಕಾವ್ಯ ಪ್ರತಿಭೆಯ ಕವಿಮಿತ್ರ ಶ್ರೀ ಮಂಜುನಾಥ ಮೆಣಸಿನಕಾಯಿ.

ಅನೇಕ ಹಿರಿಯ ಕವಿಗಳಷ್ಟು ಗಟ್ಟಿ ಸಾಹಿತ್ಯ, ಸತ್ವಯುತ ಕಾವ್ಯ ಬರೆಯುವ ಇಂದಿನ ಕಾಲೇಜು ಪ್ರತಿಭೆಗಳಿಗೆ ಸಲಾಂ ಹೇಳಲೆಬೇಕು. ಅಂಥ ಯುವ ಕವಿಗಳ ಸಾಲಿಗೆ ಸೇರುವ ಮಂಜುನಾಥ ಮೆಣಸಿನಕಾಯಿ ಯವರು ಅನೇಕ ಕವಿಗೋಷ್ಠಿಗಳಲ್ಲಿ ನನಗೆ ಭೇಟಿಯಾಗಿದ್ದರು. ದಾವಣಗೆರೆಯ ಒಂದು ಸಾಹಿತ್ಯದ ಕಾಯ೯ಕ್ರಮದಲ್ಲಿ ‘ಸರ್, ನನ್ನ ಪ್ರಥಮ ಸಂಕಲನಕ್ಕೊಂದಿಷ್ಟು ಮುನ್ನುಡಿ ಮಾತುಗಳನ್ನು ಬರೆಯಿರಿ’ ಎಂದರು.

- Advertisement -

ಹುಬ್ಬೇರಿಸಿ, ಸಂತೋಷದಿಂದ ಯುವಕವಿಯ ಹಸ್ತಪ್ರತಿಯನ್ನು ಪಡೆದು ಓದುವ ಚಡಪಡಿಕೆಯೊಂದಿಗೆ ಅಲ್ಲೆ ಒಂದೆರಡು ಕವನಗಳನ್ನು ಓದಬೇಕೆಂದು ಡಿ.ಟಿ.ಪಿ ಪ್ರತಿಗಳನ್ನು ತೆರೆದು ನೋಡಿದರೆ ಈ ಎಲ್ಲಾ ಕವನಗಳು ಇಷ್ಟೊಂದು ಚಿಕ್ಕ ವಯಸ್ಸಿನ ಕವಿಯದ್ದೆ ಎಂಬ ಪ್ರಶ್ನೆಗಳು ನನ್ನ ಮನದಲ್ಲಿ ಏಳತೊಡಗಿದವು. ಮನೆಗೆ ಬಂದು ಪ್ರತಿಯ ಕವನಗಳನ್ನು ಓದುತಿದ್ದರೆ ಓದುತ್ತಾ ಓದುತ್ತಾ ಆ ಎಲ್ಲ ಕವನಗಳು ತಮ್ಮಷ್ಟಕ್ಕೆ ತಾವೇ ನನ್ನಿಂದ ಓದಿಸಿಕೊಂಡು ಹೋಗುತ್ತಿವೆ. ಪ್ರತಿ ಕವನಗಳಲ್ಲಿ ಸಂದೇಶಗಳನ್ನು, ಉಪದೇಶಗಳನ್ನು, ಹಾಗೂ ಮಾಗ೯ದಶ೯ನ ಮಾಡುವ ಪರಿಯನ್ನು ಓದಿದರೆ ಈ ಯುವಕವಿಯ ಮೆದುಳು ಕಾವ್ಯ ಜಗತ್ತಿನಲ್ಲಿ ಹಾಗೂ ಬದುಕಿನಲ್ಲಿ ತುಂಬಾ ಅನುಭವ ಪಡೆದುಕೊಂಡಿದೆ ಎಂದೆನಿಸುತ್ತದೆ.

ಈ ಯುವ ಕವಿಯ ಕಾವ್ಯದ ಪ್ರತಿ ಕವನಗಳಲ್ಲಿ ಸಮಾಜ ಕಳಕಳಿ ಎದ್ದು ಕಾಣುತ್ತದೆ. ಇಂದಿನ ಯುವಕರಿಗೆ ಉತ್ತಮ ಸಂದೇಶ ಸಾರುತ ಪ್ರತಿಯೊಬ್ಬರೂ ತಮ್ಮ ಬದುಕನ್ನು ಸುಧಾರಿಸಿಕೊಂಡು ಉತ್ತಮ ನಾಗರಿಕರಾಗುವ ಗುಣತುಂಬುವ ಉಪದೇಶ, ಕಳವಳ ಇವರ ಕಾವ್ಯದ ಮುಖ್ಯ ಉದ್ದೇಶವಾಗಿದ್ದು ವಿಶೇಷವಾಗಿದೆ. ಇಲ್ಲಿ ನಾನು ‘ವಿಶೇಷವಾಗಿದೆ’ ಎಂಬ ಪದ ಬಳಕೆ ಮಾಡಲು ಒಂದು ಮುಖ್ಯ ಕಾರಣವಿದೆ, ಅದೇನೆಂದರೆ ಇಂದಿನ ಕಾಲಘಟ್ಟದಲ್ಲಿ ಅನೇಕ ಯುವಕವಿಗಳು ಹೆಣ್ಣು, ಕೆಂದುಟಿ, ಪ್ರೀತಿ, ಪ್ರೇಮ, ಮಿಲನ, ಹೃದಯಗಳಾಟದ, ಕದ್ದು ಮುಚ್ಚಿ ಮರಸುತ್ತುವಂಥ ಕಾವ್ಯರಚನೆಯಲ್ಲಿ ಮುಂದಿರುತ್ತಾರೆ ಆದರೆ ಶ್ರೀ ಮಂಜುನಾಥ ಮೆಣಸಿನಕಾಯಿ ಯವರ ಕಾವ್ಯದಲ್ಲಿ ಹಾಗೆಲ್ಲ ಕಂಡು ಬಾರದೇ ಇರುವದರಿಂದ ಈ ಯುವಕವಿಯನ್ನು ವಿಶೇಷ ಕವಿ ಮತ್ತು ಕಾವ್ಯ ಎಂದು ಸಂಬೋಧಿಸಿರುವೆ. ಕವನ ಸಂಕಲನದಲ್ಲಿ ಕವಿಯು ಆದ್ಯಾತ್ಮ, ಸತ್ಸಂಗ ಬದುಕು, ಅರಿತು ಬದುಕುವ ನಡೆ, ಸತ್ಯಾಸತ್ಯದ ವ್ಯತ್ಯಾಸದ ತೂಕ, ಸಮಾನತೆ, ಸಮ್ಮಾನಗಳ ಆಚಾರ ವಿಚಾರ ಸಾರುವ ಸಂತರಾಗಿದ್ದಾರೆ.

ಸದೃಢತೆ ಕಳೆದುಕೊಂಡ ಸಮಾಜಕ್ಕೆ ಸಂತೈಸುವವನು ಕವಿ ಯಾಗಲಾರ, ಸಮಾಜ ಕೆಳಮಟ್ಟಕ್ಕೆ ಇಳಿಯದಂತೆ ನೋಡುವವ, ಸಮಾಜ ಅಭಿವೃದ್ಧಿಗಾಗಿ ಸದಾ ಹಂಬಲಿಸುವವ, ಮರುಗುವವ. ತನ್ನ ಪರಿಸರವನ್ನು ಸಾರಾಸಗಟಾಗಿ ಸುಧಾರಿಸುವವನು ಸಮ ಸಮಾಜದ ಮಾದರಿ ಪ್ರಜೆಯಾದವನು ಕವಿ ಅನಿಸಿಕೊಂಡಾನು. ಹಾಗೇನೇ ಇಲ್ಲಿ ಕವಿ ಮಂಜುನಾಥ ಮೆಣಸಿನಕಾಯಿ ಯವರು ಪ್ರತಿ ಕವನ ಚುಟುಕುಗಳಲ್ಲಿ ದಾಸರು, ಸಂತರಂತೆ ಉಪದೇಶಗಳನ್ನು ಸುವಿಚಾರಾದಿಯಾಗಿ ಹೇಳಿದ್ದಾರೆ. ಪ್ರತಿಯೊಬ್ಬರು ಆತ್ಮವಿಮಶೆ೯ ಮಾಡಿಕೊಳ್ಳಬೇಕು ಎನ್ನುವ ಮಾತು ಇಷ್ಟವಾಗುವದು. ಜಗದಲ್ಲಿ ಪ್ರತಿಯೊಬ್ಬರು ಕೂಡಾ ನಾನೆ ಒಳ್ಳೆಯವನು, ನಾನೆ ಸರಿ, ನಾನೆ ಜಾಣ ಎಂದೆಲ್ಲಾ ಹೇಳುತ್ತಾ ಸದಾ ಪಾಪದ ತಪ್ಪುಗಳನ್ನು ಮಾಡುತ್ತಿರುತ್ತಾರೆ ಆದರೆ ಎಲ್ಲರು ತಮ್ಮನ್ನು ತಾವು ಅಥೈ೯ಸಿಕೊಂಡು , ಸರಿತಪ್ಪುಗಳನ್ನು ತೂಗುತ್ತ ಬದುಕಿದರೆ ಸಮಾಜದಲ್ಲಿ ಅನ್ಯಾಯ, ಅತ್ಯಾಚಾರ, ಭ್ರಷ್ಟಾಚಾರ, ಕಳ್ಳತನ, ಕೊಲೆ, ಸುಲಿಗೆ ನಡೆಯುವದಿಲ್ಲವೇನೊ ಎಂಬುದು ಕವಿಯ ಆಶಯ.

ಯುವ ಕವಿ ಮದುವೆ ಆಗದ ಹರೆಯಕ್ಕೂ ಜಾರುವ ಮೊದಲು ‘ಮದುವೆ ಆದವರ ಗೋಳು’ ಎಂದು ವ್ಯಂಗ್ಯವಾಗಿ ಕಾವ್ಯ ರಚಿಸಿದ್ದಾರೆ. ಅದು ಅವರು ಕಂಡ ಸತ್ಯಾನುಭವಗಳೊ ಅಥವಾ ಕಲ್ಪಿತವೊ. ಕಾವ್ಯದಲ್ಲಿ ಮದುವೆ(ಸಂಸಾರ) ಎಂಬ ಮೂರಕ್ಷರಗಳ ಜೀವನವನ್ನು ಮಾಡಿಟ್ಟವನಿಗೆ ಲತ್ತೆ ಪೆಟ್ಟು ಕೊಡುವದಾಗಿ ವ್ಯಂಗ್ಯವಾಗಿ ಹೇಳುವದನ್ನು ಕವಿ ಬ್ರಹ್ಮಚಯ೯ ಬದುಕನ್ನು ಬದುಕಲು ತಮ್ಮ ಗೆಳೆಯರಿಗೆ ಹರಟೆಯಾಗಿ ಹೇಳುತ್ತಾರೆ.

ಈ ಮನಸ್ಸಿನ ಮಾತಿನಲ್ಲಿ ಛತ್ರಪತಿ ಶಾಹು ಮಹಾರೋಜರು, ಬಸವಣ್ಣನವರು, ಗೌತಮ ಬುದ್ಧರು ಅವತರಿಸಿದ್ದಾರೆ. ಅವರ ಜೀವನದ ಕಾಯ೯ ಸಾಧನೆಯನ್ನು ಸ್ಲಾಗಿಸುತ್ತ ಇಂದಿನ ನವ ಪೀಢಿಗೆ ಸಮರಸದಿಂದ ಬದುಕಲು ಕರೆ ಕೊಡುವರು ಕವನಗಳ ಮೂಲಕ.

ಕವಿ ತಾ ಹೆತ್ತ ತಂದೆ ತಾಯಿ ಬಗ್ಗೆ ಕವನ ರಚಿಸದೇ ಇದ್ದರೆ ಸಂಕಲನವೆ ಅಪೂಣ೯ವೆನೊ. ಅಥವಾ ಕವಿಯ ಕವಿತ್ವವೇ ಅಪೂರ್ಣವೆನೊ ಎನ್ನುತ ಸಂಕಲನದಲ್ಲಿ ಪ್ರೀತಿಯ ಅಪ್ಪ, ಅಮ್ಮ , ಅವರ ಅಪ್ಪುಗೆಯ ಚುಂಬನದ ಟಾನಿಕ್ ನ ಸಂಜೀವಿನಿ ಓದುಗರಿಗೆ ಪ್ರದಶಿ೯ಸಿದ್ದಾರೆ. ಅಪ್ಪ ಅಮ್ಮ ದೇವರೆಂದು ಕೃತಾಥ೯ರಾಗಿದ್ದಾರೆ.

ಪರಿಸರ ಪ್ರೀತಿಯಲಿ, ಮಾನವನ ಕುಕೃತ್ಯಕ್ಕೆ ಮರಗಳು ಕಡಿಮೆಯಾಗಿ, ಪರಿಸರ ಪ್ರಕೃತಿ ಹಾಳಾಗಿ ಇಂದು ಮಳೆ ಪ್ರಮಾಣ ಕಡಿಮೆಯಾದ ಪರಿಣಾಮ ನೇರವಾಗಿ ಪ್ರಾಣಿ ಪಕ್ಷಿಗಳ ಸಂಕುಲಕ್ಕೆ ತಟ್ಟುತ್ತಿದೆ ಹಾಗಾಗಿ ಪಕ್ಷಿಗಳು ತಮ್ಮ ಒಡಲಲ್ಲಿ ಬಿಕ್ಕಿ ಬಿಕ್ಕಿ ಅತ್ತು ನೊಂದಿರುವದನ್ನು, ಬಿಸಿಲ ತಾಪಕ್ಕೆ ಚರಾಚರ ಜೀವಿಗಳು ಹೈರಾಣಾಗುವ ದೃಶ್ಯಗಳನ್ನು, ತಿನ್ನಲು ಕಾಳು ಸಿಗದೆ, ಕುಡಿಯಲು ಹನಿ ನೀರಿಲ್ಲದೆ, ಬೀಸಿಲ ಬೇಗೆಯಲಿ ಬೇಯುವ ಜೀವ ಸಂಕುಲ ಕಂಡು ಕವಿ ಮನದಲ್ಲಿ ಮರಗುವದು, ಅವುಗಳ ಬಗ್ಗೆ ದಯೆಗಾಗಿ ಪ್ರೀತಿ ಕೋರುವ ಕೋರಿಕೆಗಳು ಕವನಗಳಲ್ಲಿ ಕಂಡು ಬರುತ್ತದೆ.

ಮುಖ್ಯವಾಗಿ ಕವಿ ತನ್ನ ಮನದ ಭಾವನೆಗಳನ್ನು ಬಿತ್ತರಿಸುತ್ತ ಕಾವ್ಯಕ್ಕೆ ಅಲಂಕಾರ ಪ್ರಾಸಗಳ ಗೋಜಿಗೆ ಹೋಗದೆ, ನೇರ ಸಂದೇಶದಂತೆ, ಉಪದೇಶಗಳಂತೆ ಅತ್ಮಿಯತೆಯ ಸಲಹೆಯಂತೆ ಪದಪದಗಳ ಪೋಣಿಸಿ ಹನಿಗವನ, ಕವನಗಳನ್ನು ಬರೆದಿದ್ದಾರೆ. ಹಿರಿಯ ಕವಿ ಡಾ.ಗೌರಿಶ ಕಾಯ್ಕಿಣಿ ಯವರ ಹೇಳಿಕೆಯಂತೆ ಒಬ್ಬ ಯುವ ಕವಿ ಎಂಬ ಚಿಗುರು ಸಸಿಗೆ ನೀರು ಗೊಬ್ಬರ ಹಾಕಿ ಪ್ರೋತ್ಸಾಹಿಸಬೇಕು ಅದು ಮುಂದೆ ಬೆಳೆದು ಹೆಮ್ಮರವಾಗುವದು ಎಂಬಂತೆ ಆತ್ಮಿಯ ಸಹೋದರ ಯುವಕವಿ ಮಂಜುನಾಥ ಮೆಣಸಿನಕಾಯಿ ಯವರ ಈ “ಮನಸ್ಸಿನ ಮಾತು” ಎಂಬ ಪ್ರಥಮ ಕವನ ಸಂಕಲನಕ್ಕೆ ಪ್ರೋತ್ಸಾಹಿಸಿ ನನ್ನ ನಾಲ್ಕಾರು ಮಾತುಗಳನ್ನು ಬರೆದು ನೀಡಿರುವೆ. ಕವಿಯ ಕಾವ್ಯ ಹೆಮ್ಮರವಾಗಿ ಬೆಳೆಯಲಿ. ಕನ್ನಡ ಸಾರಸ್ವತ ಲೋಕದಲ್ಲಿ ಕವಿಗೆ ಹೆಚ್ಚಿನ ಯಶಸ್ಸು ಸಿಗಲಿ. ಈ ಯುವಕವಿಯಿಂದ ಇನ್ನು ಹೆಚ್ಚಿನ ಕೃತಿಗಳು ಹೊರಬರಲಿ ಎಂದು ಕೋಟಿ ಕನ್ನಡಿಗರು ಶುಭ ಹಾರೈಸೋಣ.

ಶ್ರೀ ಇಂಗಳಗಿ ದಾವಲಮಲೀಕ

- Advertisement -
- Advertisement -

Latest News

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...
- Advertisement -

More Articles Like This

- Advertisement -
close
error: Content is protected !!