ಸಿಂದಗಿ : ರೈತರ, ಕೃಷಿಕರ ಏಳಿಗೆ ಉದ್ದೇಶವನ್ನಿಟ್ಟುಕೊಂಡು ಸ್ಥಾಪನೆಗೊಂಡ ಕರ್ನಾಟಕ ರೈತ ಮಿತ್ರ ಏಜೆನ್ಸಿಯು ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಉತ್ತಮ ಕಾರ್ಯ ಮಾಡಲಿ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಹೊರವಲಯದ ಚಿಕ್ಕ ಸಿಂದಗಿ ಬೈಪಾಸ್ ಹತ್ತಿರವಿರುವ ಲಕ್ಕಮ್ಮದೇವಿ ದೇವಸ್ಥಾನದ ಆವರಣದಲ್ಲಿ ರೈತ ಮಿತ್ರ ಏಜೆನ್ಸಿ ಗ್ರುಪ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು ವ್ಯಾಪಾರ-ವಹಿವಾಟು, ಏಜೆನ್ಸಿಗಳು ಏನೇ ಇರಲಿ ಸಂಘಟನಾತ್ಮಕ ಕಾರ್ಯ ಮಾಡುವುದರಿಂದ ಯಶಸ್ಸು ಕಾಣಲು ಸಾಧ್ಯ. ಒಗಟ್ಟಿನಲ್ಲಿ ಬಲವಿದೆ ಎಂಬ ಮಾತಿನಂತೆ ಎಂತಹ ಸಮಸ್ಯೆ ಬಂದರೂ ಬಗೆಹರಿಸುವ ಸಾಮರ್ಥ್ಯ ಸಂಘಟನಾತ್ಮಕ ಚಟುವಟಿಕೆಗಳಲ್ಲಿದೆ. ಕಾರ್ಮಿಕರ ಅಭಾವದಿಂದಾಗಿ ಇಂದು ಎಲ್ಲ ಕಾರ್ಯಕ್ಕೂ ಯಂತ್ರಗಳನ್ನೇ ಅವಲಂಬಿಸುವುದು ಅನಿವಾರ್ಯವಾಗಿದೆ. ಕೃಷಿಗೆ ಪೂರಕವಾದ ಭಾವಿ ಕೃಷಿ ಹೊಂಡ, ಬದುವುಗಳನ್ನು ಹಾಕುವುದು, ಗಿಡಗಂಟಿಗಳನ್ನು ಸ್ವಚ್ಛಗೊಳಿಸುವುದು, ಭೂಮಿಯನ್ನು ಸಮತಟ್ಟುಗೊಳಿಸುವುದು ಈ ಮುಂತಾದ ಚಟುವಟಿಕೆಗಳಿಗೆ ಜೆಸಿಬಿ ಗಳು, ಹಿಟಾಚಿಗಳು ಲೇವಲಿಂಗ್ ಟ್ಯಾಕ್ಟರ್ಗಳು, ಟಿಪ್ಪರ್, ಡಂಪರ್ ಟ್ರಾಕ್ಟರುಗಳು ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ವಾಹನಗಳನ್ನು ಇಟ್ಟುಕೊಂಡು ಕೆಲಸ ಮಾಡುವ ಈ ರೈತ ಮಿತ್ರ ಏಜೆನ್ಸಿಯವರು ರೈತರಿಗೆ ಹೊರೆಯಾಗದಂತೆ, ಯಾವುದೇ ರೀತಿಯ ಮೋಸವಾಗದಂತೆ ಕೆಲಸಗಳನ್ನು ಮಾಡಿಕೊಟ್ಟರೆ ರೈತರು ಹಾಗೂ ಮಾಲಿಕರಿಬ್ಬರೂ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ನ್ಯಾಯವಾದಿ ದಾನಪ್ಪಗೌಡ ಚನಗೊಂಡ , ಜೆಸಿಬಿ ಹಿಟಾಚಿಗಳಂತಹ ವಾಹನಗಳ ಮಾಲೀಕರು ಕೆಲವೊಂದು ಜಿಲ್ಲೆಯಲ್ಲಿ ಬೇರೆ ಜಿಲ್ಲೆಯ, ಹೊರಗಡೆಯಿಂದ ಬಂದ ಯಂತ್ರಗಳನ್ನು ಬಳಸಿ ಕಾರ್ಯ ಮಾಡಲು ತಡೆಯೊಡ್ಡುತ್ತಿದ್ದಾರೆ. ಸ್ಥಳೀಯ ಯಂತ್ರೋಪಕರಣಗಳನ್ನೇ ಬಳಸುವಂತೆ ಆಯಾ ಜಿಲ್ಲೆಯ ಮುಖಂಡರುಗಳಿಂದ ಒತ್ತಡ ಹೇರುತ್ತಿದ್ದಾರೆ. ಇದು ನಿಲ್ಲುವಂತಾಗಬೇಕು. ಒಂದು ವೇಳೆ ಎಲ್ಲ ಜಿಲ್ಲೆಗಳಲ್ಲೂ ಈ ನಿಯಮವೇನಾದರೂ ಕಡ್ಡಾಯಗೊಳಿಸಿದರೆ ನಮ್ಮ ಜಿಲ್ಲೆಯಲ್ಲೂ ನಮ್ಮ ಜಿಲ್ಲೆಯ ಯಂತ್ರಗಳನ್ನಷ್ಟೇ ಕೃಷಿ ಮತ್ತು ಇನ್ನಿತರ ಚಟುವಟಿಕೆಗಳಿಗಾಗಿ ಬಳಸುವುದು ಹಾಗೂ ಹೊರಗಿನಿಂದ ಬಂದ ಮಷಿನರಿಗಳನ್ನು ನಿರ್ಬಂಧಿಸಲು ಎಲ್ಲ ವಾಹನಗಳ ಮಾಲೀಕರಿಗೆ ಶಾಸಕರು ಬೆನ್ನೆಲುಬಾಗಿ ನಿಲ್ಲಬೇಕೆಂದರು.
ಈ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಚಂದ್ರೇಗೌಡ ಪಾಟೀಲ, ರೈತ ಮಿತ್ರ ಏಜೆನ್ಸಿಯ ಜಿಲ್ಲಾಧ್ಯಕ್ಷ ಶಂಸುದ್ದೀನ ಮುಲ್ಲಾ, ದೇವೇಂದ್ರ ಹಾಳಕಿ, ರಾಜು ಸಾತಿಹಾಳ, ಅನಿಲ್ ನಾಯ್ಕೋಡಿ, ರಾಮದಾಸ್ ರಾಥೋಡ, ಬಾಬು ರೆಡ್ಡಿ, ರಾಜು ರಾಥೋಡ, ಸಂಭಾಜಿ ಬಂಡಗಾರ, ಸಂಜು ಚೌಹಾಣ, ಯಾಸೀನ್ ಯಾಳಗಿ ಸೇರಿದಂತೆ ಅನೇಕ ರೈತ ಮುಖಂಡರು ವಾಹನ ಮಾಲೀಕರು ಇದ್ದರು.