spot_img
spot_img

ವೈಯಕ್ತಿಕ ಬದುಕಿನಲ್ಲೂ ಅರಳಲಿ ಹೂ ನಗೆಯ ಗೊಂಚಲು

Must Read

ಒಂದು ಕಾಲದಲ್ಲಿ ಮಹಿಳೆ ನಾಲ್ಕು ಗೋಡೆಗಳ ನಡುವೆ ಬಂಧಿತಳಂತೆ ಇರಬೇಕಾಗಿತ್ತು. ಆಕೆ ಮಕ್ಕಳನ್ನು ಹೆರುವ,ಮನೆಯವರನ್ನು ನೋಡಿಕೊಳ್ಳುವ ಯಂತ್ರದಂತಿದ್ದಳು. ಆಕೆಗೆ ಸ್ವಾತಂತ್ರ್ಯವೆಂಬುದು ಗಗನ ಕುಸುಮವಾಗಿತ್ತು. ತನ್ನ ಬದುಕನ್ನು ತಾನೇ ರೂಪಿಸಿಕೊಳ್ಳುವುದು ಕನಸಿನ ಮಾತಾಗಿತ್ತು. ಇವೆಲ್ಲವುಗಳ ನಡುವೆ ಒಂದು ಮಾತಂತೂ ಸತ್ಯ ಅದೆಂದರೆ ನಮ್ಮೆಲ್ಲರ ತಾಯಂದಿರು ಅಜ್ಜಿಯಂದಿರು ಡಿಗ್ರಿ ಪಡೆದವರಲ್ಲ ಕೆಲವರಂತೂ ಶಾಲೆ ಕಾಲೇಜುಗಳ ಕಟ್ಟೆಯನ್ನೂ ಹತ್ತಿಲ್ಲ. ಕೆಲಸಕ್ಕೆ ಸಾವಿರ ಐದಂಕಿಯ ಸಂಬಳವನ್ನು ಎಣಿಸಿದವರಲ್ಲ.

ಹೀಗಿದ್ದಾಗ್ಯೂ ಜೀವನದ ಮುಸ್ಸಂಜೆಯನ್ನು ಚಿಂತೆ ಮತ್ತು ಕೊರಗಿನಿಂದ ಕಳೆಯುತ್ತಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಆಕೆ ಎಲ್ಲ ಕ್ಷೇತ್ರದಲ್ಲಿ ವಿಜಯ ಪತಾಕೆಯನ್ನು ಹಾರಿಸುತ್ತಿದ್ದಾಳೆ. ಪುರುಷನಿಗೆ ಸರಿಸವiವಾಗಿ ವಿದ್ಯೆ ಗಳಿಸಿ ಉದ್ಯೋಗಕ್ಕೆ ಸೇರಿ ಸಂಪಾದನೆ ಮಾಡಿ ಮನೆ ಮಂದಿಯನ್ನು ಸಾಕಿ ಸಲುವುವ, ಮನೆಯ ಜವಾಬ್ದಾರಿಯನ್ನು ನೀಗಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದಾಳೆ.

ವ್ಯವಹಾರ ಜ್ಞಾನ ಸಾಮಾನ್ಯ ಜ್ಞಾನದಲ್ಲಿ ಮುಂದಿರುವ ಆಕೆ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸುವಷ್ಟು ಬುದ್ಧಿವಂತಳೂ ಸಮರ್ಥಳೂ ಆಗಿದ್ದಾಳೆ. ವೃತ್ತಿ ಜೀವನದಲ್ಲಿ ಛಾಪನ್ನು ಮೂಡಿಸುತ್ತಿರುವ ಹಾಗೂ ಇಷ್ಟೆಲ್ಲ ವಿಷಯಗಳಲ್ಲಿ ಪುರುಷನಿಗಿಂತ ಮುಂದಿರುವ ಮಹಿಳೆಯರು ವೈಯಕ್ತಿಕ ಜೀವನದಲ್ಲಿ ಎಡುವುತ್ತಿದ್ದಾರೆ ಎಂದು ಹಲವರನ್ನು ನೊಡಿದಾಗ ಅನಿಸುತ್ತದೆ ಅಲ್ಲವೇ?

ಕೈ ತುಂಬ ಸಂಪಾದನೆ, ಜನಪ್ರಿಯ ಹೆಸರು, ಐಶ್ವರ್ಯ, ಸೌಂದರ್ಯ ಹೀಗೆ ಬಯಸಿದ್ದೆಲ್ಲವೂ ಇದ್ದಾಗಲೂ ಅನೇಕ ಮಹಿಳೆಯರು ವೈಯಕ್ತಿಕ ಜೀವನದಲ್ಲಿ ಸಂತಸವಾಗಿರಲು ಸಾಧ್ಯವಾಗುತ್ತಿಲ್ಲ. ಯಾವುದಕ್ಕೂ ಕಡಿಮೆ ಇಲ್ಲ ಆದರೂ ಜೀವನದಲ್ಲಿ ನೆಮ್ಮದಿ ಇಲ್ಲ ಅನ್ನುವ ಹೆಂಗಳೆಯರು ಹಲವು ತೊಳಲಾಟಗಳನ್ನು ಅನುಭವಿಸುತ್ತಿರುತ್ತಾರೆ. ಹೊರಗೆ ಯಾರೊಂದಿಗೂ ಹೇಳಿಕೊಳ್ಳಲಾಗದೇ ಒಳಗೊಳಗೆ ವೇದನೆ ಅನುಭವಿಸುವ ವನಿತೆಯರು. ನಮ್ಮ ಪಾಡು ಯಾರಿಗೂ ಬರಬಾರದು ಎಂದುಕೊಳ್ಳುತ್ತಾರೆ.

ನೋಡಿದರೆ ಇವರಿಗೇನು ಕಡಿಮೆ ಇಲ್ಲ ತುಂಬ ಸುಖವಾಗಿದ್ದಾರೆ ಅಂತ ನೋಡಿದವರು ಅಂದುಕೊಳ್ಳುತ್ತಾರೆ. ಆದರೆ ವಾಸ್ತವದಲ್ಲಿ ಅವರು ಬದುಕು ನೋವು ಸಂಕಟ ದುಃಖಗಳಿಂದ ತುಂಬಿಕೊಂಡಿರುತ್ತದೆ. ನೋಡುವವರು ಇದನ್ನೆಲ್ಲ ನಂಬದಿದ್ದರೂ ಇದು ಪೂರ್ಣ ಸತ್ಯ ಸಂಗತಿ ಆಗಿರುತ್ತದೆ. ವೃತ್ತಿಯಲ್ಲಿ ಸಾಧನೆ ಮಾಡಿದ ಮಹಿಳೆಯರು ವೈಯಯಕ್ತಿಕ ಜೀವನದಲ್ಲಿ ಹೀಗೇಕೆ ದುಃಖದಲ್ಲಿರುತ್ತಾರೆ? ಎಂಬುದನ್ನು ಕೂಲಂಕಷವಾಗಿ ಯೋಚಿಸಿದಾಗ ಮೇಲ್ನೋಟಕ್ಕೆ ಕಾಣುವಂತೆ ಇವರ ಜೀವನ ಸುಖಮಯವಾಗಿಲ್ಲ ಎಂಬುದು ತಿಳಿದು ಖೇದವೆನಿಸುತ್ತದೆ.

ನಾಲ್ಕು ಜನರಿಗೆ ಕಾಣಿಸುವಾಗ ಗಣ್ಯರು, ಸಿರಿವಂತರು, ಉನ್ನತ ಅಧಿಕಾರಿಗಳು, ಸೆಲಿಬ್ರಿಟಿಗಳು, ಎಂದೆಲ್ಲ ಕರೆಸಿಕೊಳ್ಳುತ್ತಿದ್ದರೂ ಊರಿಗೆ ಅರಸನಾದರೂ ತಾಯಿಗೆ ಮಗನಲ್ಲವೇ? ಎಂಬ ಗಾದೆ ಮಾತಿನಂತೆ ಮನೆಯಲ್ಲಿ ಎಲ್ಲರೂ ಒಂದೇ ಅಲ್ಲವೇ? ವೈಯಕ್ತಿಕ ಜೀವನ ಮತ್ತು ವೃತ್ತಿ ಜೀವನ ಎರಡನ್ನೂ ಚೆನ್ನಾಗಿ ನಿಭಾಯಿಸಿಕೊಂಡು ಖುಷಿಯಾಗಿ ನೆಮ್ಮದಿಯಿಂದ ಇರುವ ಮಹಿಳೆಯರು ನಮ್ಮ ನಡುವೆ ಇರುವುದು ಬೆರಳೆಣೆಕೆಯಷ್ಟೆ. ಮಹಿಳೆಯರ ನೆಮ್ಮದಿರಹಿತ ಸಂತೃಪ್ತಿಯಿಲ್ಲದ ಜೀವನಕ್ಕೆ ಕಾರಣಗಳನ್ನು ಹುಡುಕಿ ಹೊರಟರೆ ಹಲವಾರು ಕಾರಣಗಳು ಸಿಗುವವು. ಅವುಗಳಲ್ಲಿ ಕೆಲವನ್ನು ಇಲ್ಲಿ ನೋಡೋಣ ಬನ್ನಿ.

ಮದುವೆ ಬೇಡ:

ಮೊದಲೆಲ್ಲ ಮನೆಯಲ್ಲಿ ಪಾಲಕರು ಹದಿನೆಂಟು ಇಲ್ಲವೇ ಅಬ್ಬಬ್ಬಾ ತುಂಬ ತಡವೆಂದ್ರೆ ಇಪ್ಪತ್ತು ವರ್ಷವಾದರೆ ಸಾಕು ಮದುವೆ ಮಾಡಿಸುತ್ತಿದ್ದರು. ಆದರೆ ಈಗ ತಮ್ಮ ಹೆಣ್ಣು ಮಕ್ಕಳು ಚೆನ್ನಾಗಿ ಓದಿ ಉದ್ಯೋಗಸ್ಥರಾಗಲಿ ಯಾರ ಮುಂದೆ ಕೈ ಚಾಚುವುದು ಬೇಡ ಆರ್ಥಿಕವಾಗಿ ಸಬಲರಾಗಲಿ ಎಂದು ಬಯಸುತ್ತಾರೆ.

ಹೆತ್ತವರ ವಿಚಾರ ಹೆಣ್ಣುಮಕ್ಕಳ ಜೀವನದ ಸುಭದ್ರತೆಗಾಗಿ ಒಳ್ಳೆಯದೇನೋ ಸರಿ. ಆದರೆ, ಹೆಣ್ಣುಮಕ್ಕಳು ಹೆಚ್ಚಿನ ವ್ಯಾಸಂಗ ಮತ್ತು ಉತ್ತಮ ಉದ್ಯೋಗ ಅರಸುವುದರಲ್ಲಿ ವೈಯಕ್ತಿಕ ಬದುಕಿಗೆ ಪ್ರಾಮುಖ್ಯತೆಯನ್ನು ನೀಡುವುದೇ ಇಲ್ಲ. ಹೆಣ್ಣುಮಕ್ಕಳು ಓದಿ ಉದ್ಯೋಗ ಗಿಟ್ಟಿಸಿಕೊಳ್ಳುವುದರೊಳಗೆ 25 ವರ್ಷವಾಗಿರುತ್ತದೆ.

ಮದುವೆ ಆದ ಮೇಲೆ ಗಂಡ ಮಕ್ಕಳು ಅಂತ ಇರೋದು ಇದ್ದದ್ದೆ ವೃತ್ತಿಯಲ್ಲಿ ಸಾಧನೆ ಮಾಡಿಯೇ ಮದುವೆಯಾದರಾಯ್ತು ಅಂತ ಕೆಲವರು 30 ವರ್ಷವಾದರೂ ಮದುವೆ ಮಾಡಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಮನೆಯವರ ಒತ್ತಾಯಕ್ಕೆ ಮದುವೆಗೆ ಒಪ್ಪಿಕೊಂಡರೂ ತನ್ನ ವೃತ್ತಿ ಮತ್ತು ಆದಾಯಕ್ಕೆ ಸಮನಾದ ವರ ಸಿಕ್ಕಿದರೆ ಮಾತ್ರ ಮದುವೆ ಅಂತ ಹಟ ಹಿಡಿಯುತ್ತಾರೆ.

ಸಮನಾದ ವರ ಸಿಕ್ಕರೆ ಮಾತ್ರ ಮದುವೆಗೆ ಒಪ್ಪುತ್ತಾರೆ. ಒಂದೊಮ್ಮೆ 30 ರ ನಂತರ ಮದುವೆಯಾಗಬೇಕೆಂದು ಬಯಸಿದರೂ ಇಬ್ಬರ ನಡುವೆ ವಯಸ್ಸಿನ ಅಂತರ ತುಂಬ ಕಮ್ಮಿ ಆಗಿರುತ್ತದೆ. ಈ ವಯಸ್ಸಿಗೆ ಉತ್ತಮ ಜೀವನ ಸಂಗಾತಿ ಸಿಗುವುದು ದುರ್ಲಭ.

ಅಷ್ಟೇ ಅಲ್ಲ ಕನಸಿನ ರಾಜಕುಮಾರನಂತಿರುವ ಗುಣವಂತ ರೂಪವಂತ ಸಿಗುವುದು ಅಪರೂಪವೇ ಸರಿ. ಮತ್ತು ಅಷ್ಟು ಹೊತ್ತಿಗೆ ಯೌವ್ವನದ ಹರೆಯ ದಾಟಿ ಹೋಗಿರುತ್ತದೆ. ಹೀಗಾಗಿ ಇನ್ಮೇಲೆ ಮದುವೆಯಾಗುವುದಕ್ಕಿಂತ ಸುಮ್ಮನಿರುವುದು ಒಳ್ಳೆಯದು ಎಂದುಕೊಂಡು ಮದುವೆ ಬೇಡವೆಂದು ತೀರ್ಮಾನಿಸುತ್ತಾರೆ.

ಮೂವತ್ತರ ಆಚೆಗೆ ಕೆಲ ವರ್ಷಗಳು ಕೆಲಸದ ಜೀವನದಲ್ಲಿ ಬ್ಯೂಸಿಯಾಗಿ ಸಮಯ ಸರಿದು ಹೋಗುತ್ತದೆ ಆದರೆ 40 ದಾಟಿದ ನಂತರ ತಾನು ದುಡಿಯುವುದು ಯಾರಿಗಾಗಿ ಇಷ್ಟೆಲ್ಲ ಸಂಪಾದನೆ ಯಾರಿಗಾಗಿ ಎಂಬ ಪ್ರಶ್ನೆಗಳು ಮೂಡಲಾರಂಭಿಸುತ್ತವೆ. ಆಗ ಸಹಜವಾಗಿ ಖಿನ್ನತೆ ಬೆನ್ನು ಬೀಳುತ್ತದೆ. ಹೀಗಾಗಿ ಕೆಲ ಮಹಿಳೆಯರು ಆಧ್ಯಾತ್ಮದತ್ತ ಮುಖ ಮಾಡುತ್ತಾರೆ.

ಮಗು ಬೇಡ:

ಮೊದಲೆಲ್ಲ ಮದುವೆಯಾಗಿ ವರ್ಷ ತುಂಬುವುದರೊಳಗಾಗಿ ಮಗು ತೊಟ್ಟಿಲಲ್ಲಿ ನಗುತಿರಬೇಕು ಅಂತ ಹಿರಿಯರು ಆಶೀರ್ವದಿಸುತ್ತಿದ್ದರು. ಅಂತೆಯೇ ನವವಿವಾಹಿತ ಜೋಡಿಯೂ ಸದ್ಯಕ್ಕೆ ಮಗು ಬೇಡ ಅಂತ ಯಾವುದೇ ತಕರಾರು ತೆಗೆಯುತ್ತಿರಲಿಲ್ಲ. ಆದರೆ ಈಗಿನ ಅನೇಕ ಉದ್ಯೋಗಸ್ಥ ದಂಪತಿಗಳು ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಬೇಕು. ಆರ್ಥಿಕವಾಗಿ ಇನ್ನಷ್ಟು ಸಬಲರಾಗಬೇಕು. ಇನ್ನಷ್ಟು ಕಲಿಯಬೇಕು.

ವೃತ್ತಿಯಲ್ಲಿ ಮತ್ತಷ್ಟು ಸಾಧನೆ ಮಾಡಬೇಕು. ಈಗಲೇ ಮಗು ಆದರೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಹಾಕಿಕೊಳ್ಳುತ್ತೇವೆ. ಸದ್ಯಕ್ಕೆ ಮಗು ಬೇಡವೆಂದು ನಿರ್ಧರಿಸುತ್ತಾರೆ. ಮದುವೆಯಾಗಿ ಮೂರ್ನಾಲ್ಕು ವರ್ಷ ಮಕ್ಕಳನ್ನು ಮಾಡಿಕೊಳ್ಳುವುದಿಲ್ಲ. ಹೀಗಾಗಿ ವಯಸ್ಸು ಮೀರಿ ಹೋಗುತ್ತದೆ. ಮಕ್ಕಳಾಗುವುದು ಕಷ್ಟವಾಗುತ್ತದೆ.

ಮಕ್ಕಳಾಗದ ಕೊರಗು ಇನ್ನಿಲ್ಲದಂತೆ ಕಾಡತೊಡಗುತ್ತದೆ. ಏನಿದ್ದರೇನು ಮಕ್ಕಳಾಗಲಿಲ್ಲವಲ್ಲ ಎಂಬ ಚಿಂತೆ ಪ್ರತಿನಿತ್ಯ ಜೀವ ತಿನ್ನುತ್ತದೆ. ಕೆಲ ದಂಪತಿಗಳು ಮಗು ಬೇಗ ಮಾಡಿಕೊಳ್ಳಬೇಕೆಂದರೂ ಒತ್ತಡದ ಜೀವನ ಶೈಲಿಯಿಂದಾಗಿ ಮಕ್ಕಳಾಗದೇ ಇರುವ ಸಮಸ್ಯೆ ಕಾಡುತ್ತದೆ. ಒಂದು ಹಂತ ಮೀರಿದ ಮೇಲೆ ಖಿನ್ನತೆಗೆ ಒಳಗಾಗುವುದು ಸಹಜವಾಗಿ ಕಂಡು ಬರುತ್ತದೆ.

ಒತ್ತಡದ ಬದುಕು:

ದೈನಂದಿನ ಬದುಕು ಹೇಗಾಗಿದೆ ಅಂದರೆ ಒತ್ತಡವಿಲ್ಲದೇ ದಿನ ಕಳೆಯುವ ಪ್ರಮೇಯವೇ ಇಲ್ಲ. ಅದರಲ್ಲೂ ಉದ್ಯೋಗಸ್ಥ ಮಹಿಳೆಯರ ಒತ್ತಡವಂತೂ ಹೇಳತೀರದು. ಹಬ್ಬ ಹರಿದಿನ ವಿಶೇಷ ದಿನಗಳಲ್ಲಂತೂ ಮುಗಿದೇ ಹೋಯ್ತು. ಒತ್ತಡ ನಿರ್ವಹಣೆ ಒಂದು ಸಾಹಸದಂತೆ ಇರುತ್ತದೆ. ಹಳ್ಳಿ ಜೀವನದಲ್ಲಿ ಸ್ವಲ್ಪ ಒತ್ತಡ ಕಮ್ಮಿ ಅಲ್ಲಿಂದ ನಗರಕ್ಕೆ ಓಡಾಟ ಬೇಡ ಅಂತ ನಗರದಲ್ಲಿ ಮನೆ ಮಾಡಿ ಒತ್ತಡವನ್ನು ನಿಭಾಯಿಸಲು ಹೋಗಿ ಮನೆ ಮಂದಿಯ ಸಂಬಂಧಗಳನ್ನು ಉಳಿಸಿಕೊಳ್ಳಲು ಆಗುವುದಿಲ್ಲ. ಇನ್ನೂ ಕೆಲವರು ನಗರ ಜೀವನಕ್ಕೆ ಆಕರ್ಷಿತರಾಗಿ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಸಮಸ್ಯೆಗಳ ಸುಳಿಯಿಂದ ಹೊರಬರಲಾರದೇ ಎತ್ತರಕ್ಕೆರಲಾರದೇ ಮಿನುಗಲಾರದೇ ಖಿನ್ನತೆಗೆ ಬಲಿಯಾಗಿ ಬದುಕು ನೂಕಬೇಕಾಗುತ್ತದೆ ನಗರದ ಜೀವನ ನೋಡಲು ಚೆಂದ. ಹಳ್ಳಿ ಜೀವನ ಅನುಭವಿಸಲು ಅಂದ ನಮ್ಮ ಹಿರಿಯರು ಸುಮ್ಮನೇ ಹೇಳಿಲ್ಲ.

ಕೊನೆ ಹನಿ:

ಹಣ ಆಸ್ತಿ ಅಂತಸ್ತು ಸೌಂದರ್ಯ ಎಲ್ಲಕ್ಕೂ ಮಿಗಿಲಾದದ್ದು ಜೀವನಶೈಲಿ. ಜೀವನ ಬಹುಮೂಲ್ಯವಾದದ್ದು. ಜೀವನ ನಡೆಸುವ ಕಲೆ ಎಲ್ಲರಿಗೂ ತಿಳಿದಿರುವುದಿಲ್ಲ. ಹಾಗಂತ ಅದನ್ನು ಕಲಿಯುವುದು ಅಸಾಧ್ಯ ಅಂತೇನಿಲ್ಲ. ಎಲ್ಲದರಲ್ಲೂ ಸೈ ಅನಿಸಿಕೊಂಡ ಮಹಿಳೆ ವೈಯಕ್ತಿಕ ಜೀವನದಲ್ಲಿ ಎಡುವಲು ಮುಖ್ಯ ಕಾರಣ ವಿವೇಚನೆ ಮತ್ತು ತಾಳ್ಮೆಯನ್ನು ಕಳೆದುಕೊಳ್ಳುವುದೇ ಆಗಿದೆ.

ಸಹನೆಯ ಕೊರತೆಯಿಂದಾಗಿ ಅಹಂಕಾರದಿಂದಾಗಿ ವಿಚ್ಛೇದನಗಳ ಸಂಖ್ಯೆ ಹೆಚ್ಚುತ್ತದೆ. ವಿದ್ಯೆಯ ಜೊತೆ ವಿನಯ ವಿವೇಚನೆ ನಮ್ಮ ಸಂಸ್ಕøತಿಗೆ ತಕ್ಕನಾದ ನಡೆ-ನುಡಿ ಬೆಳೆಸಿಕೊಂಡರೆ ‘ಶಿಕ್ಷಣ ಮತ್ತು ಸಂಸ್ಕಾರ ಬದುಕಿನ ಮೂಲಮಂತ್ರ. ಶಿಕ್ಷಣ ಎಂದಿಗೂ ಎಡುವಲು ಬಿಡುವುದಿಲ್ಲ. ಸಂಸ್ಕಾರ ಕೆಡಲು ಬಿಡುವುದಿಲ್ಲ.’ಎನ್ನುವ ಮಾತಿನಂತೆ. ವೃತ್ತಿ ಜೀವನದಲ್ಲಿ ಮಿಂಚುವ ಮಹಿಳೆಯರು ವೈಯಕ್ತಿಕ ಜೀವನದಲ್ಲೂ ಹೂನಗೆಯ ಗೊಂಚಲನ್ನು ಅರಳಿಸಬಲ್ಲರು.


ಜಯಶ್ರೀ.ಜೆ. ಅಬ್ಬಿಗೇರಿ ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ 9449234142

- Advertisement -

2 COMMENTS

LEAVE A REPLY

Please enter your comment!
Please enter your name here

- Advertisement -

Latest News

ಶ್ರೀ ಕೃಷ್ಣ ಜನ್ಮಾಷ್ಟಮಿ

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ...
- Advertisement -

More Articles Like This

- Advertisement -
close
error: Content is protected !!