ಕೊಟ್ಟಕಾಣಿಕೆಯನ್ನು ತೆಗೆದುಕೊಂಡರೆ ಮರಳಿ
ಸಿಟ್ಟೇಕೆ ? ಸಿಡುಕೇಕೆ ? ದುಃಖವೇಕೆ ?
ಮಡದಿ ಮಕ್ಕಳ ಕೊಟ್ಟು ಕೊಂಡುಹೋದರೆ ದೇವ
ದುಃಖಿಸುವುದೇತಕ್ಕೆ ? – ಎಮ್ಮೆತಮ್ಮ
ಶಬ್ಧಾರ್ಥ
ಕಾಣಿಕೆ = ಕೊಡುಗೆ , ಉಡುಗೊರೆ
ತಾತ್ಪರ್ಯ
ದೇವರು ನಮಗೆ ಕಣ್ಣು, ಕಿವಿ , ಕಾಲು, ಬಾಯಿ, ಮೂಗು,
ಹೃದಯ, ಮೆದಳು ಹೀಗೆ ಅನೇಕ ಅಂಗಾಂಗಳಿಂದ ತುಂಬಿದ
ದೇಹ ಕೊಟ್ಟಿದ್ದಾನೆ. ಅದೇ ತರಹ ಅನ್ನ, ಜಲ, ಹೊಲ, ಮನೆ,
ಒಡವೆ, ವಸ್ತ್ರ, ತಂದೆ, ತಾಯಿ, ಅಣ್ಣ, ತಮ್ಮ, ಅಕ್ಕ,ತಂಗಿ, ಮಡದಿ,ಮಕ್ಕಳು ಮೊಮ್ಮಕ್ಕಳು, ಬಂಧುಬಾಂಧವರು
ಗೆಳೆಯಗೆಳತಿಯರನ್ನು ಕಾಣಿಕೆಯಾಗಿ ನಮಗೆ ಕೊಟ್ಟಿದ್ದಾನೆ.
ಇರುವಷ್ಟು ದಿವಸ ಅವುಗಳನ್ನು ಉಪಯೋಗಿಸಿ ಸುಖಪಡೆದು ಸಂತೋಷದಿಂದ ಬದುಕಬೇಕು. ಇವೆಲ್ಲವನ್ನು ಕೊಟ್ಟ ದೇವನಿಗೆ ಕೃತಜ್ಞತೆಯನ್ನು ಮತ್ತು ಧನ್ಯವಾದಗಳನ್ನು ನಿತ್ಯ ಸಲ್ಲಿಸಬೇಕು.
ಒಂದು ವೇಳೆ ತಾನು ಕೊಟ್ಟ ಕಾಣಿಕೆಗಳನ್ನು ಆ ದೇವರು
ವಾಪಾಸು ಪಡೆದುಕೊಂಡರೆ ಅವನ ಮೇಲೆ ಸಿಟ್ಟು ಸೆಡುವು
ಮಾಡುತ್ತ ನಿಂದಿಸಬಾರದು ಮತ್ತು ದುಃಖಿಸಬಾರದು. ಆ
ವಸ್ತುಗಳ ಮೇಲೆ ವ್ಯಾಮೋಹ ತೊಲಗಿ ತನ್ನ ಮೇಲೆ ನಿನ್ನ
ಮನವು ಇರಲೆಂದು ಪರೀಕ್ಷಿಸಲೋಸುಗ ವಾಪಾಸು
ಪಡೆಯುತ್ತಾನೆ. ಪರೀಕ್ಷೆಯಲ್ಲಿ ಪಾಸಾದರೆ ನಿನ್ನ ಭಕ್ತಿಗೆ
ಮೆಚ್ಚಿ ಒಲಿಯುತ್ತಾನೆ. ಜೇಡರ ದಾಸಿಮಯ್ಯ ಹೇಳುವನಿಂತು
‘ಹರ ತನ್ನ ಭಕ್ತರ ತಿರಿವಂತೆ ಮಾಡುವ.ಒರೆದು ನೋಡುವ ಮಿಸುನಿಯ ಚಿನ್ನದಂತೆ.ಅರೆದು ನೋಡುವ ಚಂದನದಂತೆ.
ಅರಿದು ನೋಡುವ ಕಬ್ಬಿನ ಕೋಲಿನಂತೆ.ಬೆದರದೆ ಬೆಚ್ಚದೆ ಇರ್ದಡೆ ಕರವಿಡಿದೆತ್ತಿಕೊಂಬ, ನಮ್ಮ ರಾಮನಾಥ’
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 944903099