ಪರಮಪುರುಷನೆ ತಂದೆ ಪ್ರಕೃತಿದೇವಿಯೆ ತಾಯಿ
ಲೋಕದಿಹ ಜನರೊಡಹುಟ್ಟಿದವರು
ವಾಸಿಸುವ ವಿಶ್ವವಿದೆ ಪುರುಷಪ್ರಕೃತಿಯರ ಮನೆ
ನರರೊಂದೆ ಕುಲದವರು – ಎಮ್ಮೆತಮ್ಮ
ಶಬ್ಧಾರ್ಥ
ಪರಮಪುರುಷ = ಪರಮಾತ್ಮ, ಪರಬ್ರಹ್ಮ
ಪ್ರಕೃತಿದೇವಿ = ಜೀವಾತ್ಮ, ಪಾರ್ವತಿ
ತಾತ್ಪರ್ಯ
ಈ ಜಗತ್ತು ಪುರುಷ ಮತ್ತು ಪ್ರಕೃತಿಯಿಂದ ಸೃಷ್ಟಿಯಾಗಿದೆ.
ಜೀವರಾಶಿಗಳು ಕೂಡ ಇವರೀರ್ವರಿಂದ ಹುಟ್ಟಿಬಂದಿವೆ.
ಹೀಗಾಗಿ ಈ ಜಗತ್ತಿನ ಜನಕ ಪರಮಪುರುಷ ಮತ್ತು ಜನನಿ
ಪ್ರಕೃತಿಮಾತೆ. ಅವರಿಂದ ಸೃಷ್ಟಿಯಾದ ಮಾನವರೆಲ್ಲ ಅವರ
ಮಕ್ಕಳು. ಆದುದರಿಂದ ಅವರೆಲ್ಲ ಸಹೋದರರು ಮತ್ತು
ಸಹೋದರಿಯರು.ಈ ಜಗತ್ತು ಪ್ರಕೃತಿಪುರುಷರು ವಾಸಿಸುವ
ಮಹಾಮನೆ. ಮಾನವರೆಲ್ಲ ಒಂದೆ ಕುಲಕ್ಕೆ ಸೇರಿದವರು. ಜಗತ್ತಿನಲ್ಲಿ ಯಾರು ಬೇರೆಯವರಿಲ್ಲ. ಈ ದೇಹದಲ್ಲಿ ಕೂಡ
ಪ್ರಕೃತಿ ಪುರುಷ ಅಂದರೆ ಜೀವಾತ್ಮ ಪರಮಾತ್ಮರಿದ್ದಾರೆ.
ಇದು ಕೂಡ ಅವರ ವಾಸಸ್ಥಾನ. ಶಂಕರಾಚಾರ್ಯರು
“ಮಾತಾ ಚ ಪಾರ್ವತಿ ದೇವಿ ಪಿತಾ ದೇವೋ ಮಹೇಶ್ವರಃ
ಬಾಂಧವಾಃ ಶಿವ ಭಕ್ತಾಶ್ಚ ಸ್ವದೇಶೋ ಭುವನತ್ರಯಂ”
ತಾಯಿ ಪಾರ್ವತಿ ಮತ್ತು ತಂದೆ ಶಿವ. ಭಕ್ತರೇ ಬಂಧುಗಳು. ಮೂರುಲೋಕವೆ ನಮ್ಮ ದೇಶ ಎಂದು ಹೇಳಿದ್ದಾರೆ. ಶಂಕರಾಚಾರ್ಯರು ಹೇಳಿದ ಹಾಗೆ ನಾವು ಅಂಥ ಭಾವನೆಯನ್ನು ಹೊಂದಿ ಈ ಭೂಮಿಯಲ್ಲಿ ಸದಾ ಕಾಲ
ಸೌಹಾರ್ದಯುತವಾಗಿ ಬಾಳಬೇಕು. ಹಾಗೆ ನಮ್ಮ ದೇಹದಲ್ಲಿ
ಇರುವ ಪರಮಾತ್ಮ ಜೀವಾತ್ಮರು ಒಂದಾಗಿಸಿ ಜೀವಿಸಬೇಕು.
ಹಾಗಾದರೆ ಮಾತ್ರ ದೇಶ ಮತ್ತು ದೇಹದಲ್ಲಿ ಶಾಂತಿ ಸಿಗುತ್ತದೆ.
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 944903099