ಅನ್ಯಮತಗಳನೆಂದು ಖಂಡನೆಯ ಮಾಡದಿರು
ನಿನ್ನ ಮತ ಮೇಲೆಂದು ಮಂಡಿಸದಿರು
ಎಲ್ಲ ಮತ ಸರ್ವ ಜನ ಸುಖಕಾಗಿ ಹಿತಕಾಗಿ
ಹೆಚ್ಚು ಕಡಿಮೆಗಳಿಲ್ಲ – ಎಮ್ಮೆತಮ್ಮ
ಶಬ್ಧಾರ್ಥ
ಖಂಡನೆ = ನಿಂದನೆ .ಮಂಡಿಸು = ವಿಷಯವನ್ನು ಮುಂದಿಡು
ತಾತ್ಪರ್ಯ
ಬೇರೆ ಧರ್ಮಗಳನ್ನು ಮತ್ತು ಬೇರೆ ಧರ್ಮೀಯರನ್ನು ನಿಂದನೆ
ಮಾಡಬಾರದು. ನನ್ನ ಧರ್ಮವೇ ಶ್ರೇಷ್ಠವೆಂದು ಗರ್ವದಿಂದ
ಮಾತನಾಡಬೇಡ. ಇದರಿಂದ ಸಮಾಜದಲ್ಲಿ ಘರ್ಷಣೆಗೆ
ಕಾರಣವಾಗುತ್ತದೆ. ಅಶಾಂತಿ, ಗಲಭೆಗಳುಂಟಾಗಿ ಮನುಷ್ಯರಿಗೆ ಮತ್ತು ಆಸ್ತಿಪಾಸ್ತಿಗೆ ಹಾನಿಯುಂಟಾಗುತ್ತದೆ. ಪರಧರ್ಮಗಳ ಸಹಿಷ್ಣತೆ ನಮ್ಮಲ್ಲಿ ಬರಬೇಕು. ಅವರವರ ಧರ್ಮ ಅವರು ಪಾಲಿಸಲಿ ಮತ್ತು ನಿನ್ನ ಧರ್ಮ ನೀನು ಪಾಲಿಸಬೇಕು. ಆದರೆ ಇನ್ನೊಂದು ಧರ್ಮವನ್ನು ಗೌರವಿಸದೆ ಅಸಹ್ಯ ಕಾಣಬಾರದು ಮತ್ತು ಅಸಭ್ಯವಾಗಿ ಮಾತನಾಡಬಾರದು. ಜಗತ್ತಿನ ಜನರಿಗೆ ಶಾಂತಿ ಸಮಾಧಾನ ಕೊಡಲು ಮತ್ತು ಎಲ್ಲರು ಸುಖವಾಗಿ ಹಿತವಾಗಿ ಜೀವಿಸಲಿಕ್ಕಾಗಿ ಧರ್ಮಗಳು ಹುಟ್ಟಿರುವುದು.ಯಾವ
ಧರ್ಮ ಹೆಚ್ಚು ಅಲ್ಲ ಕಡಿಮೆ ಅಲ್ಲ. ಎಲ್ಲ ಧರ್ಮಗಳು ಸಮಾನ.
ಅದಕ್ಕೆ ಮುಪ್ಪಿನ ಷಡಕ್ಷರಿ ಈ ತತ್ತ್ವಪದ ಹಾಡಿದ್ದಾನೆ. ಅವರವರ ದರುಶನಕೆ ಅವರವರ ವೇಷದಲಿ ಅವರವರಿಗೆಲ್ಲ ಗುರು ನೀನೊಬ್ಬನೇ| ಅವರವರ ಭಾವಕ್ಕೆ,ಅವರವರ ಪೂಜೆಗಂ ಅವರವರಿಗೆ ದೇವ ನೀನೊಬ್ಬನೇ|| ಆದಕಾರಣ ಅವರಿಗೆ ಸರಿ ಅನಿಸಿದ ರೀತಿಯಲ್ಲಿ ದೇವನನ್ನು ಅವರು ಆರಾಧಿಸುತ್ತಾರೆ. ಅವರವರ ಆಚರಣೆ ಅವರು ಆಚರಿಸಲಿ. ಎಲ್ಲ ಧರ್ಮಗಳ ಮುಖ್ಯ ಉದ್ದೇಶ ಜನರಿಗೆ ಸುಖ ಶಾಂತಿ ನೆಮ್ಮದಿ ಕೊಡುವುದಾಗಿದೆ.
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 944903099