ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

0
141

 

ಸೀರೆಯನು ಸೆಳೆವಾಗ ಮೊಲೆಮೇಲೆ ಕೈಯಿಟ್ಟು
ದ್ರೌಪದಿಯು ಕರೆಯೆ ಬರಲಿಲ್ಲ‌ ಕೃಷ್ಣ
ಕೈಯೆತ್ತಿ ಕರೆದಾಗ‌ ಬಂದು‌ ಮಾನವ ಕಾದ
ನಂಬಿ ಕರೆದರೆ ಬರುವ – ಎಮ್ಮೆತಮ್ಮ

ಶಬ್ಧಾರ್ಥ
ಕಾದ = ಕಾಯ್ದ, ಕಾಪಾಡಿದ

ತಾತ್ಪರ್ಯ
ಮಹಾಭಾರತದ ಸಭಾಪರ್ವದಲ್ಲಿ ‌ ವಸ್ತ್ರಾಪಹರಣ ಪ್ರಸಂಗ ಬರುತ್ತದೆ. ಧರ್ಮರಾಯನು ದುರ್ಯೋಧನನೊಂದಿಗೆ
ಜೂಜಾಟವಾಡಿ ತನ್ನ ರಾಜ್ಯ ತಮ್ಮಂದಿರನ್ನು‌ ಮತ್ತು ದ್ರೌಪದಿಯನ್ನು ಪಣಕ್ಕಿಟ್ಟು ಸೋಲುತ್ತಾನೆ. ಆಗ ದುರ್ಯೋಧನ ತನ್ನ ತಮ್ಮ ದುಶ್ಯಾಸನನಿಗೆ ದ್ರೌಪದಿಯನ್ನು
ಎಳೆದುತರಲು ಆದೇಶಿಸುತ್ತಾನೆ. ಅವಳ ಮುಡಿಯನ್ನು ಹಿಡಿದು ಸಭೆಗೆ‌ ಎಳೆದು ತರುತ್ತಾನೆ. ಪಾಂಡವರು ಸೋತು ತಮ್ಮ ರಾಜ ಪೋಷಾಕು ಬಿಚ್ಚಿಕೊಟ್ಟಂತೆ ದ್ರೌಪದಿಗೆ ಬಿಚ್ವಿಕೊಡಲು‌ ಹೇಳುತ್ತಾರೆ. ಅವಳು ಒಪ್ಪದಿರಲು ದುಶ್ಯಾಸನ‌ ಅವಳ ಸೀರೆಯನ್ನು ಸೆಳೆಯುತ್ತಾನೆ. ಸಭೆಯಲ್ಲಿದ್ದ ಹಿರಿಯರಾರು ಅವರ ಕುಕೃತ್ಯ ಖಂಡಿಸುವುದಿಲ್ಲ ಮತ್ತು ದ್ರೌಪದಿಗೆ ಯಾವ ಸಹಾಯ ಮಾಡುವುದಿಲ್ಲ. ನಿರುಪಾಯಳಾದ ದ್ರೌಪದಿ ಶ್ರೀಕೃಷ್ಣನನ್ನು ನೆನೆಯುತ್ತ ಸಹಾಯಕ್ಕೆ ಕರೆಯುತ್ತಾಳೆ. ಸೆರಗು ಜಾರಿದ್ದರಿಂದ ಎದೆಮೇಲೆ ಕೈಯಿಟ್ಟು ಮಾನ ಮುಚ್ಚಿ ಕೊಳ್ಳುತ್ತಾಳೆ. ಅವಳಿಗೆ ಇನ್ನೂ ದೇಹದ‌ ಮೇಲೆ‌ ಅಭಿಮಾನ ಇದೆಯೆಂದು‌‌ ಕೃಷ್ಣ ಬರುವುದಿಲ್ಲ. ಆಗ ಆಕೆ ಕೈಗಳೆರಡನ್ನು‌ ಮೇಲಕ್ಕೆತ್ತಿ‌ ಕರೆದಾಗ ಶ್ರೀಕೃಷ್ಣ ಬಂದು ಅಕ್ಷಯಾಂಬರ ದಯಪಾಲಿಸುತ್ತಾನೆ. ಈ ಕಥೆಯಿಂದ ತಿಳಿಯುವುದು ಏನೆಂದರೆ ದೇಹದ ಅಭಿಮಾನ ಬಿಟ್ಟು ದೇವರನ್ನು‌ ಭಜಿಸಿದರೆ ದೇವ ಪ್ರಸನ್ನನಾಗಿ ರಕ್ಷಿಸುತ್ತಾನೆ. ಇದು ಈ ಕಥೆಯ‌‌ ಸಂದೇಶ.

ರಚನೆ ಮತ್ತ ವಿವರಣೆ
ಎನ್.ಶರಣಪ್ಪ‌ ಮೆಟ್ರಿ
ಮೊ: 944903099