ಬಟ್ಟೆತೊಳೆಯುವವನಗಸ ಮನೆಕಟ್ಟುವನೊಡ್ಡ
ಒಡವೆಗಳ ಮಾಡುವವನಕ್ಕಸಾಲಿ
ಮಣ್ಣಿಂದ ಮಡಕೆಗಳ ಮಾಡುವವ ಕುಂಬಾರ
ಕಸುಬಿಂದ ಕುಲವಾಯ್ತು – ಎಮ್ಮೆತಮ್ಮ
ಶಬ್ಧಾರ್ಥ
ಮಡಕೆ = ಗಡಿಗೆ. ಕಸುಬು = ಕೆಲಸ
ತಾತ್ಪರ್ಯ
ಪ್ರತಿಯೊಂದು ಊರಿನಲ್ಲಿ ಹಲವಾರು ಕೆಲಸಗಳನ್ನು ಮಾಡುವ ಜನರಿರುತ್ತಾರೆ. ಬೇಸಾಯ ಮಾಡುವವನು ಒಕ್ಕಲಿಗ, ಮನೆಯ ಕಟ್ಟುವವನು ಒಡ್ಡ, ಬಟ್ಟೆ ತೊಳೆಯುವವನು ಅಗಸ, ಒಡವೆ
ಮಾಡುವವನು ಅಕ್ಕಸಾಲಿ, ಕಟ್ಟಿಗೆ ಕೆಲಸ ಮಾಡುವವನು ಕಮ್ಮಾರ, ಮಣ್ಣಿನಿಂದ ಗಡಿಗೆ ಮಾಡುವವನು ಕುಂಬಾರ
ಹೀಗೆ ಉಪ್ಪಾರ, ಬೇಡ, ಗಾಣಿಗ, ಸಿಂಪಿಗ, ಚಿಪ್ಪಿಗ, ಮಾದಾರ, ಮ್ಯಾದಾರ, ಪಿಂಜಾರ, ಹಡಪದ, ಗೊಲ್ಲ ಕುರುಬ, ಪೂಜಾರ, ಬಜಂತ್ರಿ, ಅಂಬಿಗ, ನೇಕಾರ, ಚಿತ್ರಗಾರ ಮುಂತಾದ ನೂರಾರು
ಕಸಬುದಾರರು ಇರುತ್ತಾರೆ.ಆ ಕೆಲಸಗಳನ್ನು ಅವರ ವಂಶದವರು ಮುಂದುವರಿಸಿಕೊಂಡು ಹೋಗಿ ನೈಪುಣ್ಯ
ಗಳಿಸಿದರು. ಹೀಗಾಗಿ ಅವರಿಗೆ ಆ ಕಸುಬಿನ ಹೆಸರಿನಿಂದ
ಕರೆಯತೊಡಗಿದರು. ಮುಂದೆ ಬರುಬರುತ್ತ ಆ ಕಸುಬಿನಿಂದ
ಕುಲಗಳಾಗಿ ಮಾರ್ಪಟ್ಟವು. ಅವರು ತಮ್ಮ ತಮ್ಮ ಕುಲಕಸಬು ಮಾಡುವವರಲ್ಲಿ ಮದುವೆ ಸಂಬಂಧ ಬೆಳೆಸತೊಡಗಿದರು.
ಇದರಿಂದ ಕುಲಗಳು ಹುಟ್ಟಿಕೊಂಡವು.ಕುಲವು ಹುಟ್ಟಿನಿಂದ ಬರುವುದಿಲ್ಲ. ಮಾಡುವ ಕೆಲಸದಿಂದ ಕುಲಗಳುಂಟಾದವು.
ನಿಜವಾಗಿ ವಿಚಾರಿಸಿ ನೋಡಿದರೆ ಅವು ಕುಲಗಳಲ್ಲ. ಈಗಿನ
ಮಾಸ್ತರ, ಇಂಜಿನಿಯರ, ತಹಸಿಲ್ದಾರ, ಪೋಲೀಸ, ಸೋಲ್ಜರ,
ಹೀಗೆ ನೌಕರಿ ಮಾಡುವವರ ಕುಲಗಳಿಲ್ಲ. ಆದಕಾರಣ ಕುಲವ
ಎಣಿಸದೆ ಅವರನ್ನು ಮಾನುಷ್ಯತ್ವದಿಂದ ಗೌರವಿಸಬೇಕು.
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 944903099