ಎಲ್ಲಕಡೆ ನೆಲವೆಲ್ಲ ಹಚ್ಚ ಹಸಿರಾಗಿರಲು
ಕುರಿಯ ಮನ ಸೆಳೆಯುವುದು ತಿನ್ನಲೆಂದು
ತಿಂದು ಕೊಬ್ಬಿದ ಮೇಲೆ ಕೊಂದು ತಿನ್ನುವ ಕುರುಬ
ಕುರಿ ನೀನು ಕುರುಬನವ – ಎಮ್ಮೆತಮ್ಮ||೧೫೦||
ತಾತ್ಪರ್ಯ
ಸುತ್ತಮುತ್ತ ಹಸಿರು ಬೆಳೆದಿದ್ದರೆ ಕುರಿ ತಿನ್ನಲು ಆಸೆಪಡುತ್ತದೆ.
ಆ ಕುರಿ ತಿಂದು ದಷ್ಟಪುಷ್ಟವಾಗಿ ಬೆಳೆದರೆ ಕುರುಬ ಅದನ್ನು
ಕೊಂದು ಅದರ ಮಾಂಸವನ್ನು ತಿನ್ನುತ್ತಾನೆ. ಹಾಗೆ ಮನುಷ್ಯ
ಕೂಡ ಕುರಿಯಿದ್ದಂತೆ. ಆತನ ಮುಂದೆ ರೂಪ,ರಸ, ಗಂಧ, ಶಬ್ಧ, ಸ್ಪರ್ಶ ವಿಷಯಗಳೆಂಬ ಹಸಿರು ಬೆಳೆದಿದೆ. ಆ ಎಲ್ಲ ವಿಷಯಗಳೆಂಬ ಹಸಿರನ್ನು ತಿನ್ನಲು ಮನಸು ಬಯಸುತ್ತದೆ. ಅದರಿಂದ ಅವನಲ್ಲಿ ಅಹಂಕಾವೆಂಬ ಕೊಬ್ಬು ಬೆಳೆಯುತ್ತದೆ.
ಅಹಂಕಾರದಿಂದ ಅಜ್ಞಾನ ಉಂಟಾಗುತ್ತದೆ. ಅಜ್ಞಾನದಿಂದ
ಸಂಸಾರ ಸುತ್ತಿಕೊಳ್ಳುತ್ತದೆ. ಸಂಸಾರವೆಂದರೆ ಸತಿಸುತರು
ಅಲ್ಲ. ಮನದಲ್ಲಿ ಮೂಡುವ ಕಾಮ, ಕ್ರೋಧ, ಮೋಹ, ಲೋಭ, ಮದ , ಮತ್ಸರಗಳು. ಇದರಿಂದ ಮನದಲ್ಲಿ ಅನೇಕ ಚಿಂತೆಗಳು ಮೂಡಿ ಆಯುಷ್ಯ ಕ್ಷೀಣಿಸುತ್ತದೆ.
ಮನುಷ್ಯನಿಗೆ ಸೊಕ್ಕು ಬಂದರೆ ಸೊಕ್ಕು ಮುರಿಯಲು ಕುರುಬನೆಂಬ ದೇವನು ನಾನಾ ಸಂಕಷ್ಟಗಳನ್ನು ಕೊಟ್ಟು ನಾಶಮಾಡುತ್ತಾನೆ. ಅರಗು ಬಂಗಾರ ತಿಂತು ಹಮ್ಮು ತನ್ನ ತಿಂತು ಎಂಬ ಗಾದೆಮಾತಿನಂತೆ
ಅಹಂಕಾರದಿಂದ ಸರ್ವನಾಶ. ಕುರಿ ಕೊಬ್ಬಿದಷ್ಟು ಕುರುಬನಿಗೆ
ಲಾಭ ಮತ್ತು ಕುರಿಗೆ ವಿನಾಶದಂತೆ ಗರ್ವದಿಂದ ಬೀಗಿದಷ್ಟು
ಮಾನವನಿಗೆ ಸರ್ವನಾಶ ಖಂಡಿತ. ಅದಕ್ಕೆ ಬಸವಣ್ಣನವರು
ವಚನದಲ್ಲಿ ಹೀಗೆ ಪ್ರಾರ್ಥಿಸಿದ್ದಾರೆ.ವಿಷಯವೆಂಬ ಹಸುರನೆನ್ನ ಮುಂದೆ ತಂದು ಪಸರಿಸಿದೆಯಯ್ಯಾ; ಹಸುವೇನ ಬಲ್ಲದು? ಹಸುರೆಂದೆಳಸುವುದು. ವಿಷಯರಹಿತನ ಮಾಡಿ ಭಕ್ತಿರಸವ ದಣಿಯೆ ಮೇಯಿಸಿ, ಸುಬುದ್ಧಿಯೆಂಬುದಕವನೆರೆದು, ನೋಡಿ ಸಲಹಯ್ಯಾ, ಕೂಡಲ ಸಂಗಮದೇವಾ
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 944903099