ಕತ್ತಲಾಗಿದೆಯೆಂದು ಕೈಕಟ್ಟಿ ಕೂಡದಿರು
ನೀ ನಡೆವ ಹಾದಿಯಲಿ ಹೆಜ್ಜೆಹಾಕು
ಮುಂಬೆಳಕ ತೋರುವನು ಮುಂದಡಿಯನಿಡಿಸುವನು
ಕರುಣಾಳು ಕೈಬಿಡನು – ಎಮ್ಮೆತಮ್ಮ
ಶಬ್ಧಾರ್ಥ
ಕೈಕಟ್ಟಿಕೂಡು = ಸೋಮಾರಿಯಾಗಿ ಕೂಡು. ಹಾದಿ = ದಾರಿ
ತಾತ್ಪರ್ಯ
ಗಾಢವಾದ ಕತ್ತಲಿದೆಯೆಂದು ಸುಮ್ಮನೆ ಕೂತುಕೊಳ್ಳಬೇಡ.
ದಾರಿ ನಡೆಯುತ್ತ ಹೋದಂತೆ ಕತ್ತಲಲ್ಲಿ ಕೊಂಚ ಕೊಂಚ ಬೆಳಕು ದಾರಿಯಲ್ಲಿ ಕಾಣುತ್ತದೆ. ಹಾಗೆ ಮಂದಮುಂದಕ್ಕೆ ಹೋದಂತೆ ಬೆಳ್ಳಿಚುಕ್ಕಿ ಮೂಡುತ್ತದೆ ಮತ್ತು ಮೂಡಲಲ್ಲಿ ಮುಂಬೆಳಕು ಬೀರುತ್ತ ಸೂರ್ಯದೇವ ಉದಯಿಸುತ್ತಾನೆ. ಮುಂದಿನ ದಾರಿಯಲ್ಲಿ ಬೆಳಕು ಚೆಲ್ಲುತ್ತಾನೆ. ಕರುಣಾಮಯನಾದ ರವಿ ಜಗಕ್ಕೆಲ್ಲ ಬೆಳಕು ಬೀರುತ್ತಾನೆ ಮತ್ತು ಜೀವಿಗಳನೆಲ್ಲ ಎಬ್ಬಿಸಿ ನಡೆಸುತ್ತಾನೆ. ಹಾಗೆ ನಮ್ಮಲ್ಲಿ ಅಜ್ಞಾನದ ಅಂಧಕಾರ ಇದೆಯೆಂದು ಅಧ್ಯಾತ್ಮ ಸಾಧನೆಯನ್ನು ಮಾಡುವುದನ್ನು ಬಿಡಬಾರದು. ದಿನದಿನ ಸಾಧನೆಯ ಮಾರ್ಗದಲ್ಲಿ ನಡೆಯುತ್ತ ಹೋದಂತೆ ಮೊದಮೊದಲು ಮಸಕು ಮಸಕಾಗಿ ದಾರಿ ಕಂಡರು ಬರುಬರುತ್ತ ನಿಚ್ಚಳವಾಗಿ ಕಾಣಿಸುತ್ತದೆ. ಅಂದರೆ ಅಜ್ಞಾನದ ಕತ್ತಲೆ ಕಳೆದು ಸುಜ್ಞಾನದ ಬೆಳಕು ಮೂಡುತ್ತದೆ. ಆಶಾಕಿರಣವೆಂಬ ಬೆಳ್ಳಿಚುಕ್ಕಿ ಮೂಡುತ್ತದೆ. ಮುಂದಿನ ದಾರಿಯಲ್ಲಿ ಮುಂಬೆಳಕು ಮೂಡಿ ಗುರಿಯನ್ನು ಮುಟ್ಟುವ ಮುನ್ಸೂಚನೆಯ ಲಕ್ಷಣಗಳು ತೋರುತ್ತವೆ. ಒಳಗಿನ ಅರಿವೆಯೆಂಬ ಸೂರ್ಯ ಮುಂದಿನ ದಾರಿಯಲ್ಲಿ ಸುಜ್ಞಾನದ ಬೆಳಕು ಚೆಲ್ಲಿ ಕರುಣೆಯಿಂದ ಸುಗಮವಾಗಿ ನಡೆಯುವಂತೆ ಮಾಡುತ್ತಾನೆ. ಗಾಯತ್ರಿ ಮಂತ್ರ ಪ್ರಾರ್ಥಿಸುವುದು ಒಳಗಿನ ಭರ್ಗನನ್ನು. ಭರ್ಗನೆಂದರೆ ರವಿ ಅಥವಾ ಶಿವ.
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 944903099