ಜಗಳವಾಡುವುದೊಂದು ಸುಗುಣವೆಂದೆನಬೇಡ
ಲಾಭವಿಲ್ಲದರಿಂದ ನಷ್ಟವುಂಟು
ಮನದ ನೆಮ್ಮದಿ ಕೆಡಿಸಿ ನರಕಯಾತನೆ ಕೊಡುವ
ಜಗಳವನೆ ಕಡೆಗಣಿಸು- ಎಮ್ಮೆತಮ್ಮ
ಶಬ್ಧಾರ್ಥ
ಸುಗುಣ = ಒಳ್ಳೆಯ ಗುಣ. ನೆಮ್ಮದಿ = ಸಮಾಧಾನ
ತಾತ್ಪರ್ಯ
ಬೇರೆಯವರೊಂದಿಗೆ ಗುದ್ದಾಡುವುದು , ತಂಟೆತಕರಾರು ಮಾಡುವುದು ಒಳ್ಳೆಯ ಗುಣದ ಲಕ್ಷಣವಲ್ಲ.ಅಂದರೆ ಜಗಳ
ಮಾಡುವುದು ದುರ್ಗುಣದ ಲಕ್ಷಣ. ಅದರಿಂದ ಬರಿ ನಷ್ಟವೆ ಹೊರತು ಯಾವುದೆ ಲಾಭವಿಲ್ಲ. ಜಗಳದಿಂದ ಕೋಪ
ಉಂಟಾಗುತ್ತದೆ. ಕೋಪದಿಂದ ದೇಹವೆಲ್ಲ ಕಂಪಿಸುತ್ತದೆ.
ಕೈಕಾಲುಗಳು ನಡುಗುತ್ತವೆ.ಬಾಯಾರಿಕೆ ಉಂಟಾಗುತ್ತದೆ.
ಇದರಿಂದ ಆರೋಗ್ಯದಲ್ಲಿ ಏರುಪೇರಾಗಿ ರಕ್ತದೊತ್ತಡ
ಹೆಚ್ಚಾಗುತ್ತದೆ. ಅಲ್ಲದೆ ಜಗಳವಾಡುವುದರಿಂದ ಸಂಬಂಧ
ಕೆಡುತ್ತದೆ. ಅವರು ಕೇಡು ಮಾಡಲುಬಹುದು. ಹೀಗಾಗಿ
ಮನಸ್ಸಿನ ನೆಮ್ಮದಿ ಹಾಳಾಗಿ ನರಕಯಾತನೆಯ ದುಃಖ
ಬಂದೊದುಗುತ್ತದೆ.ಅಶಾಂತಿಯಿಂದ ದೇಹದ ಆರೋಗ್ಯ
ಕೆಡುತ್ತದೆ. ಇಷ್ಟೆಲ್ಲ ದುಷ್ಪರಿಣಾಮ ಬೀರುವ ಜಗಳವನ್ನು
ಮಾಡದಿರುವುದು ಒಳ್ಳೆಯದು. ಅದಕ್ಕೆ ಯಾರು ಏನೆಂದರು
ಅದಕ್ಕೆ ಪ್ರತಿಕ್ರಿಯಿಸದೆ ಇದ್ದರೆ ಜಗಳ ಉಂಟಾಗುವುದಿಲ್ಲ.
ತನಗೆ ಮುನಿದವರಿಗೆ ತಾ ಮುನಿಯಲೇಕಯ್ಯ ತನಗಾದ ಆಗೇನು ಅವರಿಗಾದ ಚೇಗೇನು ತನುವಿನ ಕೋಪ ತನ್ನ ಹಿರಿತನದ ಕೇಡು ಮನದ ಕೋಪ ತನ್ನ ಅರಿವಿನ ಕೇಡು
ಮನೆಯೊಳಗಿನ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆ ಮನೆಯ ಸುಡದು ಕೂಡಲಸಂಗಮದೇವಾ ಎಂದು ಬಸವಣ್ಣನವರು
ಕೋಪದ ದುಷ್ಪರಿಣಾಮವನ್ನು ವಿವರಿಸಿದ್ದಾರೆ.
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 944903099