ಬಿಳಿಕರಿಯ ಭವಿಭಕ್ತ ಮೇಲ್ಜಾತಿ ಕೀಳ್ಜಾತಿ
ಕಾಫರ್ಮುಸಲ್ಮಾನ ಹಿಂದು ಮ್ಲೇಂಛ
ಇನ್ಫಿಡಲ್ ಈಸಾಯಿ ಭೇದಭಾವಗಳೇಕೆ ?
ಮಾನವತೆ ಮೊದಲಿರಲಿ- ಎಮ್ಮೆತಮ್ಮ||೧೫೩||
ಶಬ್ಧಾರ್ಥ
ಭವಿ =ವೀರಶೈವನಲ್ಲದವ.ಕಾಫರ್ =ಅಲ್ಲಾನಲ್ಲಿ ನಂಬಿಕಿಲ್ಲದವ
ಮ್ಲೇಂಛ = ಸಂಸ್ಕೃತನಲ್ಲದವ. ಇನ್ಫಿಡಲ್ = ದೇವರಲ್ಲಿ
ನಂಬಿಕಿಲ್ಲದವ
ತಾತ್ಪರ್ಯ
ಬಿಳಿಯ ಬಣ್ಣದ ಯುರೋಪಿಯನ್ನರು ಮತ್ತು ಕರಿಯ ಬಣ್ಣದ
ಆಫ್ರಿಕನ್ನರು, ಶಿವಭಕ್ತರು ಮತ್ತು ಶಿವಭಕ್ತರಲ್ಲದವರು, ಶ್ರೇಷ್ಠ
ಜಾತಿಯವರು ಮತ್ತು ಕೀಳು ಜಾತಿಯವರು, ಕಾಫೀರರು
ಮತ್ತು ಮುಸಲ್ಮಾನರು, ಹಿಂದುಗಳು ಮತ್ತು ಅಸಂಸ್ಕೃತರು,
ದೇವಧರ್ಮದಲ್ಲಿ ನಂಬಿಕೆಯಿಲ್ಲದ ನಾಸ್ತಿಕರು ಮತ್ತು ಏಸುಕ್ರಿಸ್ತನ ಭಕ್ತರು ಎಂಬ ತಾರತಮ್ಯ ಮಾಡಬಾರದು. ಎಲ್ಲ
ಮಾನವರನ್ನು ಸಮಾನರಾಗಿ ಕಾಣಬೇಕು.ಮನುಷ್ಯರೆಲ್ಲ ದೇವನಂಶವುಳ್ಳವರು ಎಂಬ ಭಾವವಿರಬೇಕು.ಮಾನವತೆಯ
ದೃಷ್ಟಿಯಿಂದ ನೋಡಬೇಕು.ಯಾರಾಗಿದ್ದರು ಅವರೊಡನೆ
ಪ್ರೀತಿ ಪ್ರೇಮದಿಂದ ಮಾನವನಾಗಿ ವರ್ತಿಸಬೇಕು. ತಾರತಮ್ಯ
ಮಾಡಿ ಅವಮಾನಿಸಬಾರದು. ಧರ್ಮದ ಶ್ರೇಷ್ಠತೆಯ ಅಮಲು ತಲೆಗೆ ಏರಿಸಿಕೊಂಡು ಭೇದಭಾವ ಎಣಿಸಿ ದುಷ್ಟತನದಿಂದ ನಡೆದುಕೊಳ್ಳಬಾರದು. ಮಾನವ ಕುಲಂ ತಾನೊಂದೆ ವಲಂ ಎಂಬ ಆದಿಕವಿ ಪಂಪನ ಮಾತು ನೆನಪಿರಲಿ. ಏನಾದರಾಗು ಮೊದಲು ಮಾನವನಾಗು ಎಂಬ ಕಾವ್ಯಾನಂದರ ವಾಣಿಯಂತೆ ಮನುಷ್ಯತ್ವದಿಂದ ವರ್ತಿಸಿ ಮಾನವೀಯ ಮೌಲ್ಯವನ್ನು ಎತ್ತಿಹಿಡಿಯಬೇಕು. ದಾನವ ಗುಣಗಳನ್ನು ಬಿಟ್ಟು ಮಾನವ ಗುಣಗಳಾದ ಪ್ರೀತಿಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು.
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 9449030990