ಎಣ್ಣೆಯಿದೆ ಎಳ್ಳಿನಲಿ ಬೆಣ್ಣೆಯಿದೆ ಹಾಲಿನಲಿ
ಚಿನ್ನವಿದೆ ಬೆಳ್ಳಿಯಿದೆ ಮಣ್ಣಿನಲ್ಲಿ
ಬೆಂಕಿಯಿದೆ ಕಲ್ಲಿನಲಿ ತೇಜವಿದೆ ಕಣ್ಣಿನಲಿ
ದೇಹದಲಿ ದೇವನಿವ – ಎಮ್ಮೆತಮ್ಮ
ಶಬ್ಧಾರ್ಥ
ಚಿನ್ನ = ಬಂಗಾರ. ತೇಜ = ಕಾಂತಿ, ಹೊಳಪು, ಬೆಳಕು.
ತಾತ್ಪರ್ಯ
ಎಳ್ಳುಕಾಳಿನಲ್ಲಿ ಎಳ್ಳೆಣ್ಣೆ ಇರುತ್ತದೆ. ಆ ಎಳ್ಳುಕಾಳುಗಳನ್ನು
ಗಾಣದಲ್ಲಿ ಹಾಕಿ ಹಿಂಡಿ ತೆಗೆಯುತ್ತಾರೆ. (ಎಳ್ಳೆಣ್ಣೆ ಒಳ್ಳೆಣ್ಣೆ ಆಯಿತು. ತಿಲದಿಂದ ತೈಲವಾಯಿತು) ಅದೇರೀತಿ ಹಾಲಿನಲ್ಲಿ ಬೆಣ್ಣೆ ಇರುತ್ತದೆ. ಹಾಲನ್ನು ಕಾಸಿ ಹೆಪ್ಪುಹಾಕಿ ಮೊಸರು ಮಾಡಿ ಕಡಗೋಲಿನಿಂದ ಕಡೆದು ಬೆಣ್ಣೆಯನ್ನು ತೆಗೆಯುತ್ತಾರೆ. ಮತ್ತೆ ಮಣ್ಣಿನ ಅದಿರಿನಲ್ಲಿ ಚಿನ್ನ ಬೆಳ್ಳಿ ಲೋಹಗಳಿರುತ್ತವೆ. ಆ ಮಣ್ಣಿನ ಅದಿರನ್ನು ಸಣ್ಣಗಾಗಿ ಅರೆದು ನೀರಿನಿಂದ ಸೋಸಿದ ಮೇಲೆ ತಳದಲ್ಲಿ ಉಳಿದದ್ದನ್ನು ಬೆಂಕಿಯಿಂದ ಕಾಸಿ ಚಿನ್ನ ಬೆಳ್ಳಿ ತೆಗೆಯುತ್ತಾರೆ. ಬೆಣಚುಕಲ್ಲಿನಲ್ಲಿ ಬೆಂಕಿ ಇರುತ್ತದೆ. ಆ ಕಲ್ಲನ್ನು ಚಕಮಕಿಯಿಂದ ಘರ್ಷಣೆಮಾಡಿ ಅರಳಿಯಿಟ್ಟು ಬೆಂಕಿಯನ್ನು ಪಡೆಯುತ್ತಾರೆ.(ಆದರೆ ಈಗ ಬೆಣಚುಕಲ್ಲು ಕರಗಿಸಿ ಮಾಡಿದ ಗಾಜಿನಪುಡಿಯನ್ನು ಕೆಂಪು ರಂಜಕದಲ್ಲಿ ಮಿಶ್ರಣಮಾಡಿ ಬೆಂಕಿಕಡ್ಡಿ ತಯಾರಿಸುತ್ತಾರೆ.ಕಡ್ಡಿ ಪೆಟ್ಟಿಗೆಯ ಪಕ್ಕದಲ್ಲಿರುವ ಮದ್ದಿಗೆ ಗೀರಿದರೆ ಕಡ್ಡಿಗೆ ಬೆಂಕಿ ಹತ್ತುತ್ತದೆ) ನಮ್ಮ ಕಣ್ಣಿನಲ್ಲಿ ಕೂಡ ಬೆಳಕು ಇದೆ. ಲಿಂಗವನ್ನು ದೃಷ್ಟಿಯಿಟ್ಟು ನೋಡಿದರೆ ಬೆಳಕು ಕಾಣುತ್ತದೆ. ನಮ್ಮ ದೇಹದಲ್ಲಿರುವ ಚೈತನ್ಯವೇ ದೇವರು. ದೇವರನ್ನು ಕಾಣಬೇಕಾದರೆ ನಿತ್ಯ ತಪ್ಪದೆ ಸಾಧನೆ ಮಾಡಬೇಕು. ಜಪತಪದಿಂದ, ಧ್ಯಾನಮೌನದಿಂದ, ದೃಷ್ಟಿಯೋಗ ಪ್ರಾಣಾಯಾಮಗಳಿಂದ ಸಾಧನೆ ಮಾಡಿದರೆ ದೇವರ ಅನುಭವ ಉಂಟಾಗುತ್ತದೆ
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 9449030990