ಯಾವ ಧರ್ಮದಿ ನೀನು ಜನಿಸಿಬಂದಿರಲೇನು?
ನೀನ್ಯಾವ ಧರ್ಮದವನಾದರೇನು ?
ಪ್ರೀತಿ ಮಾತುಗಳಿರಲಿ ನೀತಿ ನಡೆತೆಗಳಿರಲಿ
ಆಚಾರ ಧರ್ಮವೆಲೊ – ಎಮ್ಮೆತಮ್ಮ
ಶಬ್ಧಾರ್ಥ
ಆಚಾರ = ಒಳ್ಳೆಯ ನಡತೆ
ತಾತ್ಪರ್ಯ
ಯಾವ ಧರ್ಮ ಆಚರಿಸುವ ನಿನ್ನ ತಂದೆ ತಾಯಿಗಳಲ್ಲಿ ನೀನು
ಜನಿಸಿಬಂದರೇನು ಮತ್ತು ನೀನು ಯಾವ ಧರ್ಮವನ್ನು
ಆಚರಿಸುವನಾದರೇನು? ನೀನು ಹುಟ್ಟಿದ ಧರ್ಮ ಮತ್ತು
ಆಚರಿಸುವ ಧರ್ಮ ಯಾವುದಾದರು ಇರಲಿ.ಆದರೆ
ಸಕಲ ಜೀವಾತ್ಮರನ್ನು ಪ್ರೀತಿಯಿಂದ ಕಂಡು ಮಾತಾಡಿಸಬೇಕು.
ಒಳ್ಳೆಯ ನಡೆ ನುಡಿ ನೀತಿ ನಡತೆಗಳಿರಬೇಕು. ಏಸುಕ್ರಿಸ್ತನು
ನಿನ್ನ ನೆರೆಹೊರೆಯವರನ್ನು ಪ್ರೀತಿಸು ಎಂದು ಹೇಳುತ್ತಾನೆ.
ಬಸವಣ್ಣನು ಸಕಲ ಜೀವರಾಶಿಗೆ ಲೇಸು ಮಾಡೆಂದು ಮತ್ತು
ಮೃದುವಚನವೆ ಸಕಲ ಜಪತಪಂಗಳೆಂದು ಹೇಳುತ್ತಾನೆ. ಒಳ್ಳೆಯ ನಡೆನುಡಿಯೆ ನಿಜವಾದ ಧರ್ಮ.ಎಲ್ಲ ಧರ್ಮಗಳು ಜಗತ್ತಿನಲ್ಲಿ ಒಳ್ಳೆಯ ಮನುಷ್ಯನಾಗೆಂದು ಹೇಳುತ್ತವೆ. ಎಲ್ಲ ಆಕಳುಗಳ ಕ್ಷೀರ ಒಂದೆ ಇರುವಂತೆ ಎಲ್ಲ ಧರ್ಮಗಳ ಸಾರ ಕೂಡ ಒಂದೆ. ದಯೆ ದಾಕ್ಷಿಣ್ಯ ಮರುಕ ಅನುಕಂಪ ಸಕಲ ಪ್ರಾಣಿಗಳಲ್ಲಿ ಇರಬೇಕು.ಅದಕ್ಕೆ ಶರಣರು ದಯವಿಲ್ಲದಾ ಧರ್ಮವದಾವುದಯ್ಯ ದಯವೇ ಧರ್ಮದ ಮೂಲವಯ್ಯ ಎಂದಿದ್ದಾರೆ.ಇಂಥ ನೀತಿ ಮಾತುಗಳನ್ನು ಬರಿದೆ ಕೇಳುವುದು ಹೇಳುವುದಲ್ಲ.ಅದರಂತೆ ನಡೆದುಕೊಳ್ಳಬೇಕು. ಅದೆ ನಿಜವಾದ ವಿಶ್ವಧರ್ಮ ಆಗುತ್ತದೆ. ಅಂಥ ಆಚರಣೆಯಲ್ಲಿ ನಡೆದುಕೊಳ್ಳುವುದೆ ಸ್ವರ್ಗ.ಅದಕ್ಕೆ ಆಚಾರವೇ ಸ್ವರ್ಗ ಎಂಬ
ವಚನ ಇದನ್ನೆ ಹೇಳುತ್ತದೆ.
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 9449030990