ಹಾಕಿದನ್ನವನುಂಡು ಬಾಲವಲ್ಲಾಡಿಸುತ
ಸೂಚಿಸುವುದೊಡೆಯನಿಗೆ ಧನ್ಯವಾದ
ಆ ನಾಯಿಗಿಂತ ಕಡೆ ನೀಚ ಮಾನವನಿವನು
ಸ್ಮರಿಸನುಪಕಾರವನು – ಎಮ್ಮೆತಮ್ಮ
ಶಬ್ಧಾರ್ಥ
ಸೂಚಿಸು = ಸಂಜ್ಞೆಯ ಮೂಲಕ ತಿಳಿಯಪಡಿಸು.
ನೀಚ = ಕೆಟ್ಟ. ಸ್ಮರಿಸು = ನೆನೆಸು. ಉಪಕಾರ = ಸಹಾಯ
ತಾತ್ಪರ್ಯ
ಪ್ರೀತಿಯಿಂದ ಅನ್ನಹಾಕಿ ಸಾಕಿ ಬೆಳೆಸಿದ ಯಜಮಾನನನ್ನು
ಕಂಡರೆ ನಾಯಿ ಬಾಲವನ್ನು ಅಲ್ಲಾಡಿಸುತ್ತ ಕೃತಜ್ಞತೆಯನ್ನು
ತಿಳಿಯಪಡಿಸುತ್ತದೆ. ಅದಕ್ಕೆ ನಾಯಿಯನ್ನು ನಿಯತ್ತಿನ
ಪ್ರಾಣಿಯೆಂದು ಕರೆಯುತ್ತಾರೆ. ಆದರೆ ಅಂಥ ನಿಯತ್ತಿನ
ಪ್ರಾಣಿಗಿಂತ ನಿಯತ್ತಿಲ್ಲದ ಮನುಷ್ಯ ಕೆಟ್ಟವನು. ತನ್ನ
ಹೆತ್ತು ಹೊತ್ತು ತಿನಿಸಿ ಉಣಿಸಿ ಕುಡಿಸಿ ಬೆಳೆಸಿದ ತಂದೆತಾಯಿ
ಮಾಡಿದ ಉಪಕಾರವನ್ನು ನೆನೆಯುವುದಿಲ್ಲ. ಅವರ ಸೇವೆ
ಮಾಡಿ ತನ್ನ ಕೃತಜ್ಞತೆಯನ್ನು ಮತ್ತು ಅವರ ಋಣವನ್ನು
ತೀರಿಸುವುದಿಲ್ಲ. ಹೆಂಡತಿ ಬಂದ ಕೂಡಲೆ ಅವಳ ಮಾತು
ಕೇಳಿ ಹೊರಗೆ ಹಾಕುತ್ತಾನೆ. ಎಂಥ ಕೃತಘ್ನ ಮಾನವನು?
ಹಾಗೆ ತನ್ನ ಜೀವನದಲ್ಲಿ ಸಹಾಯ ಮಾಡಿ ಮೇಲಕೆತ್ತಿದ
ಬಂಧುವಿರಲಿ, ಸ್ನೇಹಿತನಿರಲಿ, ಶಿಕ್ಷಕನಿರಲಿ ಅವರನ್ನು
ಲೆಕ್ಕಿಸದೆ ಅಹಂಕಾರದಿಂದ ಮೆರೆಯುತ್ತಾನೆ. ಉಪಕಾರ ಮಾಡಿದ ಅವರಿಗೆ ಅಪಕಾರ ಮಾಡುತ್ತಾನೆ. ಗಾಳಿ ,ಬೆಳಕು
ನೀರು, ಆಹಾರ, ಭೂಮಿ, ದೇಹ, ಐಶ್ವರ್ಯ ಮುಂತಾದ
ಎಲ್ಲವನ್ನು ಕೊಟ್ಟ ದೇವನಿಗೆ ಒಂದು ಧನ್ಯವಾದವನ್ನು
ಕೂಡ ಹೇಳುವುದಿಲ್ಲ. ನಮ್ಮೆಲ್ಲರ ಯಜಮಾನನಾದ
ದೇವರ ಸ್ಮರಣೆ ಮಾಡದ ಮಾನವನು ಕೃತಘ್ನನಲ್ಲದೆ
ಮತ್ತಿನ್ನೇನು ?
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 9449030990