ದುಡ್ಡಿಲ್ಲವೆಂದೇಕೆ ಕೈಚೆಲ್ಲಿ ಕೂಡುವುದು
ಸೇವೆಯನು ಮಾಡಲಿಕೆ ಮನಸು ಮುಖ್ಯ
ನೀರುಣಿಸಿ ಬೆಳೆಸಿದಳು ಸಾಲುಮರ ತಿಮ್ಮಕ್ಕ
ನಿಸ್ವಾರ್ಥ ನಿಜಸೇವೆ – ಎಮ್ಮೆತಮ್ಮ
ಶಬ್ಧಾರ್ಥ
ಕೈಚೆಲ್ಲು = ಅಸಹಾಯಕತೆಯಿಂದ ಕಾರ್ಯ ವಿಮುಖನಾಗು
ನಿಸ್ವಾರ್ಥ = ಪರಹಿತ ಬಯಸುವ ಪ್ರವೃತ್ತಿ , ಫಲಾಪೇಕ್ಷೆಯಿಲ್ಲದ
ತಾತ್ಪರ್ಯ
ಯಾವುದಾದರು ಸಾಧನೆ ಮಾಡಬೇಕಾದರೆ ದುಡ್ಡು ಬೇಕು.
ಆದರೆ ದುಡ್ಡಿಲ್ಲವೆಂದು ಕಾರ್ಯ ಸಾಧಿಸಲು ಸಾಧ್ಯವಿಲ್ಲವೆಂದು ವಿಮುಖನಾಗಬಾರದು. ಜಗತ್ತಿನಲ್ಲಿ ಸೇವೆ ಮಾಡಲು ಅನೇಕ ಮಾರ್ಗಗಳಿವೆ. ಸೇವೆ ಮಾಡಲು ಮುಖ್ಯವಾಗಿ ದೃಢವಾದ ಮನಸ್ಸು ಬೇಕು. ದುಡ್ಡಿಲ್ಲದೆ ಮಹಾಸಾಧನೆ ಮಾಡಿದಂಥ ಸಾಲುಮರದ ತಿಮ್ಮಕ್ಕ ದೊಡ್ಡ ಉದಾಹರಣೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ತಿಮ್ಮಕ್ಕ ಜನಿಸಿದಳು. ತಂದೆ ಚಿಕ್ಕರಂಗಯ್ಯ, ತಾಯಿ ವಿಜಯಮ್ಮ. ಶಾಲೆಗೆ ಹೋಗಲು ಸಾಧ್ಯವಾಗದಿದ್ದ ಕಾರಣ ತಿಮ್ಮಕ್ಕ ಮೊದಲು ದನಕರುಗಳನ್ನು ಮೇಯಿಸುತ್ತಿದ್ದಳು. ನಂತರ ಚಿಕ್ಕಯ್ಯ ಎಂಬ ಒಬ್ಬ ದನಕಾಯುವವನನ್ನು ಲಗ್ನವಾದಳು. ಮದುವೆಯಾಗಿ ಮಕ್ಕಳಾಗದ ಕಾರಣ, ತಿಮ್ಮಕ್ಕ ಮಕ್ಕಳಿರದ ದುಃಖವನ್ನು ಮರೆಯಲು ಆಲದ ಮರಗಳನ್ನು ರಸ್ತೆಯ ಬದಿಯಲ್ಲಿ ನೆಡುತ್ತ ಬಿಂದಿಗೆಯಿಂದ ನೀರುಹೊತ್ತು 8000 ಮರಗಳನ್ನು ಬೆಳೆಸಿದಳು. ಫಲಾಪೇಕ್ಷೆಯಿಲ್ಲದೆ ಆಕೆಯ ಸಾಧನೆಗೆಗೆ ಪದ್ಮಶ್ರೀ ಮುಂತಾದ 22 ಪ್ರಶಸ್ತಿಗಳು ದೊರಕಿವೆ. ಬಂಡವಾಳ ರಹಿತ ಮತ್ತು ಸ್ವಾರ್ಥರಹಿತ ಆಕೆಯ ಸೇವೆ ಅನನ್ಯವಾದದ್ದು. ಆಕೆಯ ಪರಿಸರ ಕಾಳಜಿ ಮೆಚ್ಚುವಂದದ್ದು.ಅನಕ್ಷರಸ್ತಳಾದರು
ಆಕೆಯ ಸೇವೆಗೆ ಗೌರವ ಡಾಕ್ಟರೇಟ್ ಪದವಿ ಲಭಿಸಿತು.
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 9449030990