ತಿಂಥಿಣಿಯ ಮೌನೇಶ ಕೊಡೆಕಲ್ಲು ಬಸವಣ್ಣ
ಮತ್ತೆ ಸಾವಳಗಿ ಶಿವಲಿಂಗೇಶ್ವರ
ಹಿಂದುಮುಸ್ಲಿಮ್ಮರಲಿ ಸೌಹಾರ್ದ ಬೆಳೆಸಿದರು
ಇಂಥವರು ಬೇಕೀಗ – ಎಮ್ಮೆತಮ್ಮ
ತಾತ್ಪರ್ಯ
ನಮ್ಮ ದೇಶಕ್ಕೆ ವಲಸೆ ಬಂದ ಮುಸ್ಲಿಮ್ಮರ ಮತ್ತು ಹಿಂದುಗಳ
ನಡುವೆ ಘರ್ಷಣೆಗಳು ನಡೆಯುತ್ತಿದ್ದವು. ಇವರಿಬ್ಬರಲ್ಲಿ
ಐಕ್ಯತೆ ತರಲಿಕ್ಕಾಗಿ ಅನೇಕ ಶರಣರು, ಅವದೂತರು, ಆರೂಢರು ಅದ್ವೈತಿಗಳು, ಮತ್ತು ಸೂಫಿ ಸಂತರು ಶ್ರಮಿಸಿದ್ದಾರೆ. ಅಂಥವರಲ್ಲಿ ತಿಂಥಿಣಿಯ ಮೌನೇಶ್ವರರು, ಕೊಡೆಕಲ್ಲು ಬಸವಣ್ಣನವರು ಮತ್ತು ಸಾವಳಿಗಿ ಶಿವಲಿಂಗೇಶ್ವರ
ಶಿರಹಟ್ಟಿಯ ಫಕೀರಸ್ವಾಮಿಗಳು, ಯಮನೂರು ಚಾಂಗದೇವ
ಮತ್ತೆ ಕಲಬುರ್ಗಿ ಶರಣಬಸವೇಶ್ವರ, ಖ್ವಾಜಾ ಬಂಧೆ ನವಾಜ್
ಹುಬ್ಬಳ್ಳಿಯ ಸಿದ್ಧರೂಢರು, ಕಳಸದ ಗೋವಿಂದ ಭಟ್ಟರು
ಮತ್ತು ತತ್ವಪದಕಾರರಾದ ಶಿಶುನಾಳ ಶರೀಫ್ ಸಾಹೇಬ, ಕಡಕೋಳ ಮಡಿವಾಳಪ್ಪ, ಚನ್ನೂರು ಜಲಾಲ್ ಸಾಬ್, ಸಾಲ್ಗುಂದಿ ಫೀರ್ ಖಾದ್ರಿ ಮುಂತಾದ ಮಹನೀಯರು ಹಿಂದೂ-ಮುಸ್ಲಿಮರಲ್ಲಿ ಸಹೋದರತೆ, ಸಹಬಾಳ್ವೆಯ ಬೀಜ ಬಿತ್ತಿದ್ದಾರೆ. ಅವರಲ್ಲಿ ಸಮನ್ವಯವನ್ನು ತರಲು ಯತ್ನಿಸಿದ್ದಾರೆ. ದ್ವೇಷ ಬಿಡು ಪ್ರೀತಿ ಮಾಡು ಎಂಬ ಸಂದೇಶ ಸಾರಿದ್ದಾರೆ. ಸ್ವಾತಂತ್ರ ಹೋರಾಟ ಸಂದರ್ಭದಲ್ಲಿ ಬ್ರಿಟಿಷರು ಒಡೆದು ಆಳುವ ನೀತಿಯಿಂದ ಹಿಂದು ಮುಸ್ಲಿಮ್ಮರಲ್ಲಿ ದ್ವೇಷದ ಬೀಜ ಬಿತ್ತಿದರು. ಮತ್ತು ದೇಶವನ್ನು ಹಿಂದುಸ್ತಾನ ಪಾಕಿಸ್ತಾನವಾಗಿ ಒಡೆದರು. ಮತ್ತೆ ಸ್ವಾತಂತ್ರ ಬಂದ ಮೇಲೆ ಕೂಡ ರಾಜಕೀಯ ಪಕ್ಷಗಳು ಮತಕ್ಕಾಗಿ ವಿಷಬೀಜ ಬಿತ್ತಿದರು. ಅದಕ್ಕಾಗಿ ಮೇಲೆ ಆಗಿಹೋದಂಥ ಮಹನೀಯರಂತೆ ಭಾವೈಕ್ಯ ಮೂಡಿಸುವ
ಮಹನೀಯರು ಸಾಕಷ್ಟು ಸಂಖ್ಯೆಯಲ್ಲಿ ಬರಬೇಕಾಗಿದೆ. ಇಂದಿನ ವೈಷಮ್ಯದ ಸಮಾಜದಲ್ಲಿ ಅವರ ಅವಶ್ಯಕತೆಯಿದೆ.
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 9449030990