ಒಳ್ಳೆಯವನಾಗೆಂದು ಒಳಿತನ್ನೆ ಮಾಡೆಂದು
ನೀನೆಂದು ಮಾಡದಿರು ಕೆಟ್ಟದೆಂದು
ಸಾರುತಿವೆ ಸರ್ವ ಮತಧರ್ಮಗಳ ಗ್ರಂಥಗಳು
ಧರ್ಮಗಳ ತಿರುಳೊಂದೆ – ಎಮ್ಮೆತಮ್ಮ
ಶಬ್ಧಾರ್ಥ
ತಿರುಳು = ಸಾರ
ತಾತ್ಪರ್ಯ
ಧರ್ಮದ ಹತ್ತು ಲಕ್ಷಣಗಳನ್ನು ಮನುಸ್ಮೃತಿ ಹೀಗೆ ಹೇಳುತ್ತದೆ.
“ಧೃತಿ ಕ್ಷಮಾ ದಮಃ ಅಸ್ತೇಯಂ ಶೌಚಮಿಂದ್ರಿಯನಿಗೃಹಃ
ಧೀರ್ವಿದ್ಯಾ ಸತ್ಯಮಕ್ರೋಧೋ ದಶಕಂ ಧರ್ಮ ಲಕ್ಷಣಂ”
ಧೃತಿ ಅಂದರೆ ತಾಳ್ಮೆಯಿಂದಿರುವುದು. ಕ್ಷಮೆಯೆಂದರೆ
ಕ್ಷಮಿಸುವುದು.ದಮ ಎಂದರೆ ದಮನ ಒಳಹೊರಗಿನ ಶತ್ರುಗಳನ್ನು ನಿಗ್ರಹಿಸುವುದು. ಅಸ್ತೇಯ ಎಂದರೆ ಕದಿಯದೆ
ಇರುವುದು. ಶೌಚ ಎಂದರೆ ಒಳಹೊರಗೆ ಶುಚಿಯಾಗಿರುವುದು.
ಇಂದ್ರಿಯನಿಗ್ರಹ ದೇಹದ ೫ ಕರ್ಮೇಂದ್ರಿಯಗಳು ಮತ್ತು
೫ ಜ್ಞಾನೇಂದ್ರಿಯಗಳನ್ನು ನಿಗ್ರಹಿಸುವುದು. ಧೀ ಎಂದರೆ ಬುದ್ಧಿ
ಅದು ಸದ್ಬುದ್ಧಿಯಿರಬೇಕು.ವಿದ್ಯೆ ಎಂದರೆ ಪರ ವಿದ್ಯೆಯಲ್ಲ. ಅಪರ ವಿದ್ಯೆ ಗಳಿಸಬೇಕು. ಸತ್ಯ ಎಂದರೆ ಸದಾ ಕಾಲ ನಿಜವನ್ನೆ ನುಡಿಯಬೇಕು.ಕೊನೆಯದಾಗಿ ಅಕ್ರೋಧ ಅಂದರೆ ಕೋಪ ಮಾಡಿಕೊಳ್ಳಬಾರದು. ಹೀಗೆ ಮಾನವೀಯತೆಯ ಗುಣಗಳು ಎಲ್ಲ ಧರ್ಮಗಳ ಗ್ರಂಥಗಳಲ್ಲಿ ಹೇಳಲ್ಪಟ್ಟಿವೆ. ಇಂಥ ಎಲ್ಲ ಸದ್ಗುಣಗಳನ್ನು ಅಳಡಿಸಿಕೊಳ್ಳಲು ಎಲ್ಲ ಧರ್ಮಗಳು ಹೇಳುತ್ತವೆ. ವ್ಯಾಸರು ಪರೋಪಕಾರ ಪುಣ್ಯಾಯ ಪಾಪಾಯ ಪರಪೀಡನಃ ಎಂದು ಎಲ್ಲ ಗ್ರಂಥಗಳ ಸಾರವನ್ನು ಅರ್ಧ ಶ್ಲೋಕದಲ್ಲಿ ಹೇಳಿದ್ದಾರೆ. ಜನರಿಗೆ ಒಳ್ಳೆಯದು ಮಾಡಬೇಕು ಮತ್ತು ಯಾರಿಗೂ ಕೇಡು ಮಾಡಬಾರದು. ಒಳಿತು ಮಾಡಿದರೆ ಪುಣ್ಯ.ಕೇಡು ಮಾಡಿದರೆ ಪಾಪ.ಎಲ್ಲ ಧರ್ಮ ಸಾರ ಒಂದೆ.
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 9449030990