ಕಸಬಳಿದೆ ನಾನೆಂಬಹಂಕಾರವಿನಿತಿಲ್ಲ
ಸುಮ್ಮನಿದೆ ಕಸಪೊರಕೆ ಮೂಲೆಯಲ್ಲಿ
ನಾನೆ ಮಾಡಿದೆನೆಂಬ ಠೇಂಕಾರವೇತಕ್ಕೆ ?
ಪೊರಕೆಯನು ನೋಡಿ ಕಲಿ – ಎಮ್ಮೆತಮ್ಮ ||
ಶಬ್ಧಾರ್ಥ
ಠೇಂಕಾರ = ಗರ್ವ. ಪೊರಕೆ = ಕಸಬಳಿಯುವ ಬರಲು.
ತಾತ್ಪರ್ಯ
ಸ್ವಚ್ಛವಾಗಿ ಕಸಬಳಿದ ಮೇಲೆ ಕಸಪೊರಕೆ ಹೋಗಿ ಒಂದು
ಮೂಲೆಯಲ್ಲಿ ಮೌನವಾಗಿ ಸುಮ್ಮನೆ ಕೂಡುತ್ತದೆ. ನಾನು
ಅಂಗಳ ಗುಡಿಸಿದೆನೆಂದು ಗರ್ವದಿಂದ ಮೆರೆಯುವುದಿಲ್ಲ.
ಮನೆಯಲ್ಲಿ ಅಂಗಳದಲ್ಲಿ ದಿನದಿನವು ಕಸ ತುಂಬಿದರು
ಬೇಸರವ ಮಾಡಿಕೊಳ್ಳದೆ ಗುಡಿಸುತ್ತಲೆ ಇರುತ್ತದೆ.
ಜಗತ್ತು ಎನ್ನುವುದೊಂದು ದಿನದಿನ ಕಸತುಂಬುವ ಮನೆ. ಹಾಗೆ ಮಹಾತ್ಮರು ಈ ಜಗದ ಕಸ ನಿರ್ಮೂಲ ಮಾಡುವ ಪೊರಕೆ. ಹೀಗೆ ಈ ಜಗವನ್ನು ಉದ್ಧರಿಸಿದರು ಕೂಡ ಮೌನವಾಗಿ ಇರುತ್ತಾರೆ. ನಾನು ಉದ್ಧರಿಸಿದೆನೆಂದು ಗರ್ವದಿಂದ ಮೆರೆಯುವುದಿಲ್ಲ. ಅದಕ್ಕೆ ನಾವು ಅವರನ್ನು ಅವತಾರ ಪುರುಷರು ಎನ್ನುತ್ತೇವೆ. ಕಾಲಕಾಲಕ್ಕೆ ಅವತಾರ ಪುರುಷರು ಜನ್ಮವೆತ್ತಿ ಕಸಗುಡಿಸಲು ಬರುತ್ತಾ ಇರುತ್ತಾರೆ. ಅಂಥ ಪೊರಕೆಯನ್ನು ನೋಡಿ ಮಾನವನು ಕಲಿಬೇಕಾದದ್ದು ಬಹಳವಿದೆ. ಅದು ನಮ್ಮ ಅಂಗಳವನ್ನಲ್ಲದೆ ನಮ್ಮ ಮನವನ್ನು
ಕೂಡ ಶುದ್ಧಮಾಡುವ ಗುರು. ಆದಕಾರಣ ಮಾನವನು
ನಾನು ಮಾಡಿದೆ, ನಾನು ಬೆಳೆಸಿದೆ, ನಾನು ಉದ್ಧರಿಸಿದೆ
ಎಂಬ ಅಹಂಕಾರವನ್ನು ಬಿಟ್ಟು ಕಸಪೊರಕೆಯಂತೆ ಮೌನ
ತಾಳಬೇಕು. ಅಹಂಕಾರ ನಿರಶನದಿಂದ ಮಾನವನು ಶಂಕರ
ಆಗುತ್ತಾನೆ. ಆದಕಾರಣ ಕಸಪೊರಕೆ ನಮ್ಮ ಗುರು ಮತ್ತು
ಒಳಗೆ ಹೊರಗೆ ಶುದ್ಧೀಕರಿಸುವದೆ ನಮ್ಮ ಗುರಿಯಾಗಬೇಕು.
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 9449030990