ತನ್ನರಮನೆಗೆ ಬಂದ ಬಡಸ್ನೇಹಿತನ ಕಂಡು
ಕೃಷ್ಣನುಪಚರಿಸಿದನು ಪ್ರೀತಿಯಿಂದ
ಅವನು ತಂದವಲಕ್ಕಿ ತಿಂದು ಹರಸಿದನವಗೆ
ಸ್ನೇಹ ಹೀಗಿರಬೇಕು – ಎಮ್ಮೆತಮ್ಮ||
ಶಬ್ಧಾರ್ಥ
ಉಪಚರಿಸು = ಸತ್ಜರಿಸು.
ತಾತ್ಪರ್ಯ
ಗೊಲ್ಲನಾದ ಶ್ರೀಕೃಷ್ಣ ಮತ್ತು ಬ್ರಾಹ್ಮಣನಾದ ಸುದಾಮ ಇಬ್ಬರು ಸಂದೀಪಿನಿ ಮುನಿಯ ಆಶ್ರಮದಲ್ಲಿ ಶಾಲೆ ಕಲಿಯುತ್ತಿದ್ದರು. ಇಬ್ಬರಲ್ಲಿ ಬಹಳ ಗಾಢವಾದ ಗೆಳೆತನವಿತ್ತು. ಬೆಳೆದಂತೆ ಕೃಷ್ಣ ರಾಜನಾದ ಸುದಾಮ ಬಡವನಾದ. ಬಡತನದ ಬೇಗೆಯಿಂದ ನೊಂದು ಬೆಂದ ಸುದಾಮನ ಪತ್ನಿ ಸುಶೀಲಾ ಅರಸನಾದ ಗೆಳೆಯ ಕೃಷ್ಣನಿಂದ ಸಹಾಯ ಕೇಳೆಂದು ಸುದಾಮನಿಗೆ ಹೇಳುತ್ತಾಳೆ. ಕೊನೆಗೆ ಸುದಾಮ ಸರಿಯೆಂದು ಗೆಳೆಯನಿಗೆ ಇಷ್ಟವಾದ ಒಂದು ಹಿಡಿ ಅವಲಕ್ಕಿ ಗಂಟು ಕಟ್ಟಿಕೊಂಡು ಹೋಗುತ್ತಾನೆ. ಅರಮನೆಗೆ ಬಂದ ಬಾಲ್ಯ ಸ್ನೇಹಿತನ ಕಂಡು ಪ್ರೀತಿಯಿಂದ ಸಿಂಹಾಸನದ ಮೇಲೆ ಕೂಡಿಸಿ ಅತಿಥಿ ಸತ್ಕಾರ ಮಾಡುತ್ತಾನೆ. ಚಿನ್ನದ ತಟ್ಟೆಯಲ್ಲಿ ಭೂರಿ ಭೋಜನ ಮಾಡಿಸುತ್ತಾನೆ. ನನಗಾಗಿ ಏನು ತಂದಿಯೆಂದು ಅವಲಕ್ಕಿ ಗಂಟು ಕಿತ್ತುಕೊಂಡು ಕೃಷ್ಣ ತಿನ್ನುತ್ತಾನೆ. ಆದರೆ ಸ್ವಾಭಿಮಾನದ ಸುದಾಮ ಏನೂ ಸಹಾಯ ಕೇಳುವುದಿಲ್ಲ. ಆದರೆ ಕೃಷ್ಣ ಸಹಾಯ ಮಾಡದೆ ಇರಲಿಲ್ಲ. ಅವನ ಮನದ ಇಂಗಿತ ಅರಿತು ಮನೆ ನಿರ್ಮಿಸಿ ಸಿರಿವಂತನಾಗುವಂತೆ ಮಾಡುತ್ತಾನೆ.
ಕಷ್ಟ ಕಾಲದಲ್ಲಿ ಬಂಧು ಬಳಗ ಯಾರೂ ನೆರವಾಗುವುದಿಲ್ಲ. ನಿಜವಾದ ಸ್ನೇಹಿತ ಮಾತ್ರ ಕಷ್ಟದಲ್ಲಿ ನೆರವು ನೀಡುತ್ತಾನೆ ಎಂಬುದು ಕಥೆಯ ಸಾರಾಂಶ. ಪ್ರೀತಿ ತುಂಬಿದ ವರ್ಗವರ್ಣರಹಿತ ನಿಷ್ಕಲ್ಮಷ ಸ್ನೇಹ ಇವರದ್ದು. ಹೀಗಿರಲಿ ಸ್ನೇಹ.
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 9449030990