ದಿನಕ್ಕೊಂದು‌ ಎಮ್ಮೆತಮ್ಮನ‌ ಕಗ್ಗದ ತಾತ್ಪರ್ಯ

0
92

 

ಚಟ್ಟ ದಶಕಂಠನಿಗೆ ಪಟ್ಟವನ‌ ತಮ್ಮನಿಗೆ
ಕಟ್ಟಿದನು ಶ್ರೀರಾಮಚಂದ್ರನಂದು
ದುರ್ಜನರ ಕೊಲ್ಲುವನು ಸಜ್ಜನರ‌ ಕಾಯುವನು
ಮೊರೆಹೋಗು ದೈವಕ್ಕೆ‌ – ಎಮ್ಮೆತಮ್ಮ|

ಶಬ್ಧಾರ್ಥ
ಚಟ್ಟ = ಹೆಣವನ್ನು ಸಾಗಿಸುವ ಬಿದುರಿನ‌ ಚೌಕಟ್ಟು
ಪಟ್ಟ = ರಾಜ್ಯಾಧಿಕಾರ

ಪರಸ್ತ್ರೀ ಲಂಪಟನಾದ ದುಷ್ಟ ರಾವಣನು ಅಧರ್ಮದಿಂದ
ಸೀತಾಪಹರಣ ಮಾಡಿಕೊಂಡು ಬಂದ ಕಾರಣ ಆತನೊಡನೆ
ಯುದ್ಧಮಾಡಿ ಶ್ರೀರಾಮ ಸಂಹರಿಸಿದನು. ಅವನ ತಮ್ಮ
ವಿಭೀಷಣ ಅವರಣ್ಣನಿಗೆ ಸೀತೆಯನ್ನು‌ ರಾಮನಿಗೆ ಬಿಟ್ಟುಕೊಡು ಎಂದು ಸಲಹೆ‌ ನೀಡಿದನು. ಆತನ ಮಾತನ್ನು
ಕೇಳದ‌ ಕಾರಣ‌ ರಾವಣನ ಪಕ್ಷವನ್ನು‌ ಬಿಟ್ಟು ರಾಮನ‌ ಪಕ್ಷ
ಸೇರಿದನು. ಸಾತ್ವಿಕನಾದ ವಿಭೀಷಣನ ಗುಣಮೆಚ್ಚಿ ರಾವಣನ
ಲಂಕಾರಾಜ್ಯದ ರಾಜನ ಪಟ್ಟಕಟ್ಟಿ ಅಧಿಕಾರವನ್ನು ಶ್ರೀರಾಮ
ವಹಿಸಿದನು. ರಾಜಸಿಕ‌ ಗುಣವುಳ್ಳ ರಾವಣ ಗರ್ವದಿಂದಾಗಿ ಹತನಾದ. ಸಾತ್ವಿಕ ಗುಣವುಳ್ಳ ವಿಭೀಷಣ ವಿನಯತೆಯಿಂದ‌
ಬದುಕಿ‌ ಬಾಳಿದ.ಅಧರ್ಮದಿಂದ ನಡೆಯುವ ದುಷ್ಟರನ್ನು
ದೇವರು ಶಿಕ್ಷಿಸುತ್ತಾನೆ ಮತ್ತು ಧರ್ಮದಿಂದ ನಡೆಯುವ
ಸಜ್ಜನರನ್ನು‌ ರಕ್ಷಿಸುತ್ತಾನೆ ಎಂಬುದು ರಾಮಾಯಣದಲ್ಲಿ
ಬರುವ ಕಥೆಯಿದು. ಅದಕ್ಕಾಗಿ ದೇವರಿಗೆ‌‌ ಶಿಷ್ಟ‌ ರಕ್ಷಕ
ದುಷ್ಟ‌ ಶಿಕ್ಷಕ‌ ಎಂದು‌ ಕರೆಯುತ್ತಾರೆ. ಸಾತ್ವಿಕನಿಗೆ ಬೆಲೆಯುಂಟು
ಎಂಬುದು ಈ ಕಥೆಯಿಂದ ತಿಳಿಯುತ್ತದೆ.ಆದಕಾರಣ ನಾವು
ರಾಜಿಸಿಕರಾಗಿ ಅಧರ್ಮದಿಂದ ಅಹಂಕಾರಿಗಳಾಗಿ ಬಾಳದೆ ಸಾತ್ವಿಕರಾಗಿ ಧರ್ಮದಿಂದ ವಿನಯವಂತರಾಗಿ ಬಾಳಬೇಕು.

ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ
ಗಂಗಾವತಿ
9449030990

LEAVE A REPLY

Please enter your comment!
Please enter your name here