ಭೂತಭೂತವು ಸೇರಿ ಜನಿಸಿತೊಂದದ್ಭುತವು
ಇದರ ಮರ್ಮವನಿಷ್ಟು ತಿಳಿಯಬೇಕು
ಹಾಲು ತುಂಬಿದ ಕೊಡದಿ ಸುಪ್ಪಾಣಿ ಮುತ್ತುಯಿದೆ
ಮನಸಿಟ್ಟು ಹುಡುಕದನು- ಎಮ್ಮೆತಮ್ಮ|
ಶಬ್ಧಾರ್ಥ
ಭೂತಭೂತವು =ಪಂಚಭೂತಗಳು .ಸುಪ್ಪಾಣಿ = ಶ್ರೇಷ್ಟವಾದ
ತಾತ್ಪರ್ಯ
ಅದ್ಭುತವಾದ ಈ ಶರೀರವು ಪೃಥ್ವಿ,ಅಪ್ಪು,ತೇಜ, ವಾಯು ಮತ್ತು ಆಕಾಶವೆಂಬ ಪಂಚಭೂತಗಳು ಸೇರಿಕೊಂಡು
ಉಂಟಾಯಿತು. ಈ ದೇಹದಲ್ಲಿ ಅದ್ಭುತವಾದ ಶಕ್ತಿಯಿದೆ.
ಅದರ ರಹಸ್ಯವನ್ನು ತಿಳಿದುಕೊಳ್ಳುವುದೆ ಅಧ್ಯಾತ್ಮ. ಈ ದೇಹವೆಂಬ ಕೊಡದಲ್ಲಿ ನಿರ್ಮಲವಾದ ಮನವೆಂಬ ಹಾಲು ತುಂಬಿದೆ. ಅದರಲ್ಲಿ ಸುಜ್ಞಾನವೆಂಬ ಥಳಥಳ ಹೊಳೆಯುವ ಶ್ರೇಷ್ಠವಾದ ಮುತ್ತೊಂದಿದೆ. ಅದನ್ನು ಏಕಾಗ್ರಚಿತ್ತದಿಂದ
ಹುಡುಕಿ ತೆಗೆ. ಜೀವನದ ಮುಖ್ಯ ಉದ್ಧೇಶ ಅಂಥ ಜ್ಞಾನ
ಪಡೆದುಕೊಳ್ಳುವುದಾಗಿದೆ. ನಹಿ ಜ್ಞಾನೇಶ ಸದೃಶ್ಯಂ ಎಂದು
ಗೀತೆ ಹೇಳುತ್ತದೆ. ಜ್ಞಾನಕ್ಕೆ ಸಮಾನವಾದದ್ದು ಮತ್ತೊಂದಿಲ್ಲ.
ಅದನ್ನೆ ಪ್ರಜ್ಞಾನಂ ಬ್ರಹ್ಮ ಎಂದು ಹೇಳುತ್ತಾರೆ. ಆ ಜ್ಞಾನವೇ
ದೇವರು. ಗಾಯತ್ರಿ ಮಂತ್ರ ಭರ್ಗೋ ದೇವಸ್ಯ ದೀಮಹೀ
ಧೀಯೋ ಯೋ ನ ಪ್ರಚೋದಯಾತ್ ಎಂದು ಹೇಳುತ್ತದೆ.
ಭರ್ಗದೇವನೆ ಬುದ್ಧಿಯನ್ನು ಮಾತ್ರ ಕೊಡು ಎಂಬುದು ಸಾರಾಂಶ. ಅಂಥ ಬುದ್ಧಿಯನ್ನು ಗಳಿಸಿದರೆ ಜಗತ್ತಿನ ಎಲ್ಲ
ವಿಷಯ ತಿಳಿದುಬರುತ್ತದೆ. Knowledge is power ಎಂಬ
ಆಂಗ್ಲೋಕ್ತಿ ಬುದ್ಧಿಯೇ ಮಹಾಶಕ್ತಿ ಎಂದು ಹೇಳುತ್ತದೆ. ನಮ್ಮ
ಸುಪ್ತಪ್ರಜ್ಞೆಯಲ್ಲಿ ಎಲ್ಲ ಅಡಕವಾಗಿದೆ. ನಾವು ಅದನ್ನು ಜಾಗ್ರತಗೊಳಿಸಬೇಕು. ಅದುವೆ ಅಧ್ಯಾತ್ಮದ ಸಾಧನೆ.
ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ
ಗಂಗಾವತಿ
9449030990