ಕೈಬಾಯಿ ಶುದ್ಧವಿರೆ ದಾರಿದ್ರ್ಯವೆಲ್ಲಿಯದು
ನಿಷ್ಠೆಯಲಿ ದುಡಿವವಗೆ ದುಡಿತದಲ್ಲಿ?
ಎಲ್ಲಿ ನೋಡಿದರಲ್ಲಿ ಲಕ್ಷ್ಮಿ ಗೋಚರಿಸುವಳು
ದುಡಿತ ದುಡ್ಡಿನ ಮೂಲ – ಎಮ್ಮೆತಮ್ಮ
ಶಬ್ಧಾರ್ಥ
ದಾರಿದ್ರ್ಯ = ಬಡತನ. ನಿಷ್ಠೆ = ಶ್ರದ್ಧೆ
ತಾತ್ಪರ್ಯ
ಕಳ್ಳತನ ಮಾಡದೆ ಸುಳ್ಳು ಹೇಳದೆ ಸತ್ಯಶುದ್ಧ ಕಾಯಕ
ಮಾಡಿ ಜೀವಿಸುವವನಿಗೆ ಬಡತನ ಬರುವುದಿಲ್ಲ. ಮಾಡುವ
ಕೆಲಸದಲ್ಲಿ ಶ್ರದ್ಧೆಯಿರಬೇಕು ಮತ್ತು ಭಾವ ಶುದ್ಧವಾಗಿರಬೇಕು.
ಹಾಗೆ ದುಡಿಯುವವನಿಗೆ ಐಶ್ವರ್ಯ ತಂತಾನೆ ಅವನ ಕೈಗೆ
ಬಂದು ಸೇರುತ್ತದೆ. ನಾನು ಶ್ರೀಮಂತನಿದ್ದೇನೆ ಎಂದು ದೃಢವಾದ ನಂಬಿಕೆಯಿಂದ ಚಿಂತಿಸುತ್ತಿದ್ದರೆ ಸಂಪತ್ತು ಎಲ್ಲಾಕಡೆಯಿಂದ ಹರಿದು ಬರುತ್ತದೆ. ಏಕೆಂದರೆ ಯದ್ಭಾವಂ
ತದ್ಭವತಿ ಎಂಬೋಕ್ತಿಯಿದೆ. ಭಾವಶುದ್ಧವಿದ್ದವನಿಗೆ ಭಾಗ್ಯಕ್ಕೆ
ಕಮ್ಮಿಯಿಲ್ಲ. ದುಡಿತದಿಂದಲೆ ದುಡ್ಡು ಸಿಗುತ್ತದೆ. ದುಡಿತವೆ
ಸಂಪಾದನೆಯ ಮೂಲ. ಸೋಮರಿತನವೆ ದಾರಿದ್ರ್ಯಕ್ಕೆ
ದಾರಿಮಾಡಿಕೊಡುತ್ತದೆ. ಆದಕಾರಣ ಚಟುವಟಿಕೆಯಿಂದ
ಇದ್ದು ಸಂತಸದಿಂದ ಕಾಯಕಮಾಡಬೇಕು. ಅದಕ್ಕೆ ಶರಣರು
ಕಾಯಕವೆ ಕೈಲಾಸವೆಂದರು. ಕೆಲಸವನ್ನು ಬೇಕಾಬಿಟ್ಟಿಯಾಗಿ
ಬೇಜವಾಬ್ದಾರಿಯಿಂದ ಮಾಡಿದರೆ ದರಿದ್ರ ಲಕ್ಷ್ಮಿಗೆ ಆಹ್ವಾನ
ಕೊಟ್ಟಂತಾಗುತ್ತದೆ. ಅಚ್ಚುಕಟ್ಟಾಗಿ ಬಹಳ ಕಾಳಜಿಯಿಂದ
ಸದ್ಭಾವನೆಯಿಂದ ಕೆಲಸ ಮಾಡಿದರೆ ಎತ್ತ ನೋಡಿದರತ್ತ
ಲಕ್ಷ್ಮಿ ಕಾಣಿಸುತ್ತಾಳೆ. ಮೊದಲು ಮನಸ್ಸು ಮತ್ತು ಚಿಂತನೆ
ಶುದ್ಧವಿಟ್ಟುಕೊಂಡು ದುಡಿದರೆ ದುಡ್ಡಿಗೆ ಕೊರತೆಯಿಲ್ಲ. ಕೆಟ್ಟ
ಮನಸ್ಸಿನಿಂದ ಮತ್ತು ಮೈಗಳ್ಳತನದಿಂದ ಮೈ ಉಳಿಸಿಕೊಂಡು ದುಡಿದರೆ ಕೊನೆಗೆ ಬಡತನವೆ ಬಂದೊದಗುತ್ತದೆ.
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 9449030990