ನೂರಾರು ತಾರುಗಳ ಕೊಳ್ಳುತ್ತ ಕಳಿಸುತ್ತ
ಜನನಮರಣದ ಸುದ್ದಿಯಿದ್ದರೇನು ?
ನಿರ್ಲಿಪ್ತನಾಗಿರುವ ತಂತಿಚಾಲಕನಂತೆ
ವರಯೋಗಿ ನೀನಾಗು – ಎಮ್ಮೆತಮ್ಮ
ಶಬ್ಧಾರ್ಥ
ತಾರು – ತಂತಿ ಸಂದೇಶ(Telegram).
ನಿರ್ಲಿಪ್ತ- ಯಾವ ಸಂಬಂಧ ಹಚ್ಚಿ ಕೊಳ್ಳದವನು.
ತಂತಿಚಾಲಕ – ತಂತಿ ಕಛೇರಿಯಲ್ಲಿ ತಂತಿ ಸಂದೇಶ ಕಳಿಸುವವನು ಮತ್ತು ಸ್ವೀಕರಿಸುವವನು. ವರ – ಶ್ರೇಷ್ಠ
(ಈಗಿನ ಮಕ್ಕಳಿಗೆ ತಾರು ಅಥವಾ ತಂತಿ ಸಂದೇಶವೆಂದರೆ
ಅರ್ಥವಾಗುವುದಿಲ್ಲ. ಅದನ್ನು telegram ಎಂದು ಬ್ರಿಟಿಷರು ನಮ್ಮ ದೇಶಕ್ಕೆ ತಂದು ಪರಿಚಯಿಸಿ ಇಲಾಖೆಯೊಂದನ್ನು ಪ್ರಾಂಭಿಸಿದರು. ಅದಕ್ಕೆ ಅಂಚೆ ಮತ್ತು ತಂತಿ (P&T) ಇಲಾಖೆಯೆಂದು ಹೆಸರಿಟ್ಟರು. ಅದನ್ನೆ ಸ್ವಾತಂತ್ರ್ಯಾ ನಂತರ ಭಾರತ ಸರ್ಕಾರ ಮುಂದುವರಿಸಿತು. ರಾಜೀವ ಗಾಂಧಿ ಪ್ರಧಾನಿಯಾದಾಗ ಎರಡನ್ನು ಬೇರೆ ಮಾಡಿ Postalಮತ್ತು Telecommunication ಎಂದು ಮಾಡಿದರು.ಮತ್ತೆ ಅದನ್ನು BSNL ಎಂದು ಖಾಸಗೀಕರಣ ಮಾಡಿತು. ಈ ಮೊಬೈಲ್ ಬಂದ ನಂತರ ತಂತಿಕಚೇರಿಗಳನ್ನು ಸರ್ಕಾರ ಮುಚ್ಚಿಬಿಟ್ಟಿತು. ಶಾರ್ಟಾಗಿ ಶೀಘ್ರವಾಗಿ ಸ್ವಲ್ಪ ಶಬ್ಧಗಳ ಮೆಸೇಜ್ ಕಳಿಸುವುದೆ ತಾರು. ಒಂದೆ ತಂತಿಯನ್ನುಎಳೆದು ಮತ್ತೆ ಭೂಮಿಯನ್ನೆ(earthing) ಇನ್ನೊಂದು ತಂತಿಯಂತೆ ಮಾಡಿಕೊಂಡು ವಿದ್ಯುತ್ ಹರಿಸುವುದು ಮತ್ತು ವಿದ್ಯುತ್ ನಿಲ್ಲಿಸುವುದು ಮಾಡಿದಾಗ telegraph instrument ನಲ್ಲಿ ಕಬ್ಬಿಣದ ಕೊಳಬೆ (armeture) ಕಡ ಮತ್ತು ಕಟ್ಟ ಎಂಬ ಶಬ್ಧ ಮಾಡುತ್ತದೆ. ಆ ಕಡ ಮತ್ತು ಕಟ್ಟಗಳ ಸಂಯೋಜನೆಯಿಂದ ಅಕ್ಷರಗಳನ್ನು ಸಂಕೇತದಿಂದ ಬರೆದುಕೊಳ್ಳಲಾಗುವುದು. ಮೋರ್ಸೆ ಎಂಬ ವಿಜ್ಞಾನಿ ಇದನ್ನು ಕಂಡುಹಿಡಿದ ಕಾರಣ ಮೋರ್ಸ ಭಾಷೆ ಎಂದು ಕರೆಯುತ್ತಾರೆ.ಹೇಗೆ ಕುರುಡರಿಗೆ ಬ್ರೈಲ್ ಲಿಪಿ ಇರುತ್ತದೆಯೊ ಹಾಗೆ ಮೋರ್ಸಭಾಷೆ ಇತ್ತು. |ಕಡ ಕಟ್ಟ – A| ಕಟ್ಟ ಕಡ ಕಡ ಕಡ – B| ಕಟ್ಟ ಕಡ ಕಟ್ಟ ಕಡ – C| ಹೀಗೆ ಸಂಯೋಜಿಸಿ ಅಕ್ಷರ ಕಲಿಸುತ್ತಾರೆ. ಅವನ್ನೆ ಡಿಕೋಡ್ ಮಾಡಿ ಬರೆದುಕೊಂಡುMessage ವಿಳಾಸದವರಿಗೆ ಕಳಿಸಿಕೊಡುತ್ತಿದ್ದರು. ಮುಂದೆಅದರಲ್ಲಿ ಅಭಿವೃದ್ಧಿಯಾಗಿ Teleprinter , Electronic Teleprinter , EKBC ಬಂತು. ಕೊನೆಗೆE.mail ಥರ e-message ಬಂತು. ಹೀಗೆ ಅಭಿವೃದ್ಧಿ ಹೊಂದುತ್ತ ಬಂತು. ಯಾವಾಗ ಮೊಬೈಲ್ ಬಂತೋ ಅವೆಲ್ಲ ಮೂಲೆಗುಂಪಾದವು ಮತ್ತು ಮುಂದಿನ ಮಕ್ಕಳಿಗೆ Exhibitionಲ್ಲಿ ಇಡುವಂತಾಯಿತು. Start immedietly,Come soon, Father expired, Sita delivered son,ಹೀಗೆ ತಂತಿಸಂದೇಶಗಳು ಇರುತ್ತಿದ್ದವು. ಅಂಥ ಇಲಾಖೆಯಲ್ಲಿನಾನಿದ್ದ ಕಾರಣ ವೃತ್ತಿ ಆಧಾರಿತ ಕಗ್ಗ ಬರೆದಿರುವೆ.ಜನರಿಗೆ ತಿಳಿಯಲೆಂದು ಅದನ್ನು ವಿವರಿಸಿರುವೆ. ಬೇಸರಮಾಡಿಕೊಳ್ಳದೆ ಓದಿರಿ)
ನೂರಾರು ತಂತಿಸಂದೇಶಗಳನ್ನು ಸ್ವೀಕರಿಸುವ ಮತ್ತು
ಕಳಿಸುವ ತಂತಿಚಾಲಕ (Telegraphist ) ಅವುಗಳಲ್ಲಿ
ಸತ್ತ ಸುದ್ದಿ ಅಥವಾ ಹುಟ್ಟಿದ ಸುದ್ದಿ ಇದ್ದರೇನು. ಅವುಗಳ
ಬಗ್ಗೆ ಅವನು ತಲೆ ಕೆಡಿಸಿಕೊಳ್ಳದೆ ನಿರ್ಲಿಪ್ತನಾಗಿರುತ್ತಾನೆ.
ಹಾಗೆ ನಾವು ಕೂಡ ಜೀವನದಲ್ಲಿ ನಡೆಯುವ ತಂದೆ ತಾಯಿಯ ಸಾವಾಗಲಿ ಮಕ್ಕಳ ಜನನವಾಗಲಿ ಆದಾಗ ದುಃಖಿಸದೆ ಸುಖಿಸದೆ ಸಮಚಿತ್ತವನ್ನು ಕಾಯ್ದುಕೊಂಡು ತಂತಿಚಾಲಕನಂತೆ ನಿಜವಾದ ಯೋಗಿಯಾಗಬೇಕು. ಚಿಂತೆವ್ಯಥೆಗಳಿಂದ ಮತ್ತು ಅತೀ ಸಂತೋಷದಿಂದ ರಕ್ತದೊತ್ತಡ ಹೆಚ್ಚಾಗಿ ಹೃದಯ ಸ್ಥಂಭನ ಆಗುವ ಅಪಾಯವಿರುತ್ತದೆ.ದುಃಖ ಹೆಚ್ಚಾಗಬಾರದು ಮತ್ತು ಸಂತೋಷ ಕೂಡ ಹೆಚ್ಚಾಗಬಾರದು. ಆದಕಾರಣ ಅವುಗಳ ಸಮತೋಲನ ಕಾಯ್ದುಕೊಂಡರೆ ನೀನೆ ಮಹಾಯೋಗಿ. ಸಮಾಧಿ ಎಂದರೆ ಗೋರಿಯಲ್ಲ ಸಮತ್ವ ಅಥವಾ ಸಮವಾದ(balanced) ಬುದ್ಧಿ ಎಂದರ್ಥ. ಯೋಗಿಗಳು ಅಂಥ ಸಮಾಧಿ ಸ್ಥಿತಿಯಲ್ಲಿ ಪರವಶವಾಗಿ ಆನಂದ ಅಥವಾ ಬ್ರಹ್ಮಾನಂದ ಅನುಭವಿಸುತ್ತಾರೆ.
ಅದಕ್ಕೆ ಸದಾ ಕಾಲ ಸ್ಥಿತಪ್ರಜ್ಞೆಯನ್ನು ಕಾಪಾಡಿಕೊಳ್ಳಬೇಕು.
ರಚನೆ ಮತ್ತುವಿವರಣೆ
ಎನ್.ಶರಣಪ್ಪ ಮೆಟ್ರಿ