ಭಾಗವತ ಬೈಬಲ್ಲು ವಚನವೇದಕುರಾನು
ಗುರುಗ್ರಂಥಸಾಹೇಬವುಪನಿಷತ್ತು
ತಂದೊಟ್ಟಿಗಿಟ್ಟರೂ ಜಗಳವಾಡುವುದಿಲ್ಲ
ಜಗಳವೇಕೆಮ್ಮಲ್ಲಿ – ಎಮ್ಮೆತಮ್ಮ
ತಾತ್ಪರ್ಯ
ಭಾಗವತ = ಶ್ರೀಕೃಷ್ಣನ ಚರಿತ್ರೆ. ಬೈಬಲ್ = ಕ್ರಿಸ್ತನ ಚರಿತ್ರೆ
ವಚನ = ಶರಣರ ಅನುಭಾವ.ವೇದ = ಋಷಿಗಳ ದರ್ಶನ
ಕುರಾನು = ಮಹಮ್ಮದ್ ಪೈಗಂಬರರ ಬೋಧನೆಗಳು
ಗುರುಗ್ರಂಥ ಸಾಹೇಬ = ಗುರುನಾನಕರ ಪ್ರಾರ್ಥನೆಗಳು
ಉಪನಿಷತ್ತು = ವೇದಗಳ ಕೊನೆಯ ಅಧ್ಯಾಯ
ತಾತ್ಪರ್ಯ
ವ್ಯಾಸ ಬರೆದ ಮಹಾಭಾರತ, ವಾಲ್ಮೀಕಿ ಬರೆದ ರಾಮಾಯಣ, ಋಷಿಗಳು ರಚಿಸಿದ ವೇದೋಪನಿಷತ್ತುಗಳು, ಶರಣರು ಬರೆದ ವಚನಗಳು, ಪೈಗಂಬರರು ಬೋಧಿಸಿದ ಕುರಾನು , ಕ್ರಿಸ್ತನ
ಶಿಷ್ಯರು ಬರೆದ ಕ್ರಿಸ್ತನ ಚರಿತ್ರೆ ಮತ್ತು ಬೋಧನೆಗಳ ಸಂಕಲನ
ಬೈಬಲ್ಲು ,ಗುರುನಾನಕರು ಮತ್ತು ಅವರ ಶಿಷ್ಯರು ಬರೆದ
ಪ್ರಾರ್ಥನೆಗಳ ಸಂಕಲನ ಗುರುಗ್ರಂಥ ಸಾಹೇಬ ಇವೆಲ್ಲ
ಮಾನವೀಯ ಮೌಲ್ಯಗಳನ್ನು ಮತ್ತು ಆಧ್ಯಾತ್ಮಿಕ ವಿಚಾರಗಳನ್ನು ಹೇಳುವ ಮಹಾಗ್ರಂಥಗಳು. ಇವು ಜ್ಞಾನದ
ಸದ್ಗ್ರಂಥಗಳು. ಎಲ್ಲಮಾನವ ಜನಾಂಗಕ್ಕೆ ಬೇಕಾದ ಉತ್ತಮ
ಗ್ರಂಥಗಳು. ಈ ಗ್ರಂಥಗಳನ್ನು ತಂದು ಒಟ್ಟಿಗೆ ಇಟ್ಟರೆ
ನಾಹೆಚ್ಚು ನೀಕಡಿಮೆ ಎಂದು ಮಾನವರಂತೆ ಕಚ್ಚಾಡುವುದಿಲ್ಲ.
ಅವು ಜ್ಞಾನದ ನಿಧಿಗಳು. ಈ ಎಲ್ಲ ಗ್ರಂಥಗಳು ಶಾಂತಿ, ಸೈರಣೆ, ಸಹಬಾಳ್ವೆ, ಸಮಬಾಳು, ಸಮಭಾವ, ಸತ್ಯ, ಅಹಿಂಸೆ, ಪ್ರೀತಿ, ಕರುಣೆ, ಸಮಾನತೆ ಹೇಳುತ್ತವೆ. ಅವುಗಳನ್ನು ಓದುವ ನಾವೆಲ್ಲ ಸಂಕುಚಿತ ಭಾವನೆ ಬಿಟ್ಟು ಎಲ್ಲರೊಂದಿಗೆ ಸೌಹಾರ್ದವಾಗಿ ಈ ಭೂಮಿಯಲ್ಲಿ ಬದುಕಬೇಕು.
ರಚನೆ ಮತ್ತ ವಿವರಣೆ
ಎನ್ .ಶರಣಪ್ಪ ಮೆಟ್ರಿ
ಮೊ: 9449030990