ತಾನೊಬ್ಬ ತಿನ್ನುವುದು ತರವಲ್ಲ ಮಾನವನು
ಕೊಂಚವಾದರು ಹಂಚಿ ತಿನ್ನಬೇಕು
ಕರೆದು ತಿನ್ನುವ ಕಾಗೆಕೋಳಿಗಳ ನೋಡಿ ಕಲಿ
ದಾಸೋಹ ಧರ್ಮಗುಣ – ಎಮ್ಮೆತಮ್ಮ
ಶಬ್ಧಾರ್ಥ
ತರವಲ್ಲ = ಸರಿಯಲ್ಲ
ತಾತ್ಪರ್ಯ
ಮಾನವನು ವಿಶ್ವಕುಟುಂಬಿಯಾಗಿ ಬದುಕಬೇಕು ಎಂಬ
ತತ್ತ್ವವನ್ನು ಈ ಕಗ್ಗ ಒರೆಯುತ್ತಿದೆ. ತಾನು ತನ್ನ ಕುಟುಂಬ ತನ್ನ
ಪರಿವಾರ ತಿನ್ನುವುದು ಸ್ವಾರ್ಥವಾಗುತ್ತದೆ. ಸಮಾಜದ ಇತರ
ಜನರಿಗೆ ಅನ್ನ ಸಂತರ್ಪಣೆ ಮಾಡಿದರೆ ಅವರಿಂದ ನಮಗೆ
ಆಶೀರ್ವಾದ ಸಿಗುತ್ತದೆ. ಪ್ರತಿಯೊಬ್ಬರಲ್ಲಿ ದೇವರು ಇರುತ್ತಾನೆ.
ಅವರನ್ನು ತೃಪ್ತಿಪಡಿಸಿದರೆ ಒಳಗಿರುವ ದೇವ ತೃಪ್ತನಾಗುತ್ತಾನೆ.
ಶಿವಯೋಗಿನಃ ಸಂತೃಪ್ತೊ ತೃಪ್ತೋ ಭವತು ಶಂಕರಃ ಎಂದು
ಸಿದ್ಧಾಂತ ಶಿಖಾಮಣಿಯಲ್ಲಿ ಹೇಳಲಾಗಿದೆ. ಕಾಗೆ ಕೋಳಿಗಳನ್ನು ನೋಡಿ ನಾವು ಕಲಿಯೇಕು.ಕಾಗೆ ಒಂದಗುಳ ಕಂಡಡೆ ಕರೆಯದೆ ತನ್ನ ಬಳಗವನು, ಕೋಳಿ ಒಂದು ಗುಟುಕ ಕಂಡಡೆ ಕೂಗಿ ಕರೆಯದೆ ತನ್ನ ಕುಲವನೆಲ್ಲವ, ಶಿವಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದಡೆ ಕಾಗೆ ಕೋಳಿಯಿಂದ ಕರಕಷ್ಟ ಕೂಡಲಸಂಗಮದೇವಾ ಎಂದು ಜಗಜ್ಯೋತಿ ಬಸವಣ್ಣನವರು ದಾಸೋಹದ ಕುರಿತಾಗಿ ಹೇಳಿದ್ದಾರೆ. ಕೊಂಚವಾಗಿ ಹಂಚಿ ತಿನ್ನುವುದು ಧರ್ಮದ ಗುಣವಾಗಿದೆ. ದಾಸೋಹ ಶರಣರ ಪರಿಕಲ್ಪನೆಯಾಗಿದೆ. ಶಿವಸ್ವರೂಪಿಗಳಾದ ಜನರ ಸೇವೆಯನ್ನು
ದಾಸನಾಗಿ ಸದುವಿನಯದಿಂದ ಮಾಡುವುದೆ ದಾಸೋಹ.
ಇಲ್ಲಿ ನೀಡುವವನು ಸೇವಕ ಮತ್ತು ನೀಡಿಸಿಕೊಂಡು
ಉಣ್ಣುವವನು ಭಿಕ್ಷುಕನಲ್ಲ ಭಗವಂತ ಎಂಬ ಭಾವನೆ
ಇರುವುದೆ ನಿಜವಾದ ಧರ್ಮದ ಗುಣವಾಗಿದೆ.
ರಚನೆ ಮತ್ತ ವಿವರಣೆ
ಎನ್ .ಶರಣಪ್ಪ ಮೆಟ್ರಿ
ಮೊ: 9449030990