ಇಂದು ನಾಳೆಗೆಯೆಂದು ತಂದು ಕೂಡಿಡಬೇಡ
ತಂದಿಡುವ ಶಿವನೆಂದು ಬಡವನಲ್ಲ
ಹೊಂದಿಸುವನವನೆಲ್ಲ ಜೀವಿಗಳಿಗಾಹಾರ
ಸಂದೇಹಬಿಡು ನೀನು – ಎಮ್ಮೆತಮ್ಮ
ತಾತ್ಪರ್ಯ
ಈ ಕಗ್ಗ ಸಂಗ್ರಹ ಗುಣವನ್ನು ಅನುಮೋದಿಸುವುದಿಲ್ಲ. ಇದು
ಶರಣರ ದಾಸೋಹ ಕಲ್ಪನೆಯನ್ನು ಎತ್ತಿ ಹಿಡಿಯುತ್ತದೆ. ಈಗ
ಎಲ್ಲಿ ನೋಡಿದರಲ್ಲಿ ಕೊಳ್ಳುಬಾಕತನ ಹೆಚ್ಚಾಗಿದೆ.ಅಂದರೆ
ಬೇಕಾದುದಕ್ಕಿಂತ ಹೆಚ್ಚು ಹೆಚ್ಚು ಕೊಂಡುತರುವ ಅಭ್ಯಾಸ.
ಇದರಿಂದ ದೇಶದಲ್ಲಿ ಬಡತನದ ಪರಿಧಿ ಹೆಚ್ಚಾಗುತ್ತದೆ.ಹಂಚಿ
ತಿನ್ನುವ ಗುಣವನ್ನು ನಾವು ಬೆಳಸಿಕೊಳ್ಳಬೇಕು. ಮುಂದೆ
ತನಗೆ ತನ್ನ ಮಕ್ಕಳು ಮೊಮ್ಮಕ್ಕಳು ಮರಿಮೊಮ್ಮಕ್ಕಳಿಗೆ
ಇರಲೆಂದು ಆಸ್ತಿ ಧನಕನಕ ಸಂಪಾದಿಸುವುದು ತರವಲ್ಲ.
ಯಾವ ಆಕಳು ತನ್ನ ಕರುವಿಗೆ ಇರಲೆಂದು ಹುಲ್ಲಿನ ಬಣವೆ
ಹಾಕಿ ಸಂಗ್ರಹಿಸುವುದಿಲ್ಲ. ಅಂದು ದೊರಕ್ಕಿದ್ದನ್ನು ಅಂದೆ
ತಿಂದು ಸಂತೋಷಪಡುತ್ತದೆ. ಅಚ್ಚಗಿದ್ದಲ್ಲಿ ತಿನ್ನುತ್ತದೆ
ಬೆಚ್ಚಗಿದ್ದಲ್ಲಿ ಮಲಗುತ್ತದೆ. ಪಶುಪಕ್ಷಿಪ್ರಾಣಿಗಳು ಸಂಗ್ರಹ
ಮಾಡದೆ ಆಗ ದೊರಕ್ಕಿದ್ದನ್ನು ಸಂತೃಪ್ತಿಯಿಂದ ತಿಂದು ಸಂತೋಷಪಡುತ್ತವೆ. ಜೇನುಹುಳು, ಇಲಿ,ಇರುವೆಗಳು ಮಾತ್ರ ಸಂಗ್ರಹಿಸುತ್ತವೆ. ಸಂಗ್ರಹಬುದ್ಧಿಯಿಂದ ಅವುನಾಶವಾಗುತ್ತವೆ.
ಎಲ್ಲ ಜೀವಿಗಳಿಗೆ ಆಹಾರ ಒದಗಿಸುವ ದೇವನಿದ್ದಾನೆ.ಅದನ್ನು ಒದಗಿಸುವ ದೇವರು ಬಹಳ ಶ್ರೀಮಂತ.ಈ ಜಗತ್ತಿನಲ್ಲಿ ಎಲ್ಲರಿಗೆ ಮಿಗುವಷ್ಟು ಸಂಪತ್ತಿದೆ. ಆದರೆ ನಮ್ಮ ಮಾನಸಿಕ ದಾರಿದ್ರ್ಯದಿಂದ ನಾವು ಭೌತಿಕವಾಗಿ ದರಿದ್ರರಾಗುತ್ತಿದ್ದೇವೆ. ಭಾವ ಶುದ್ಧವಿದ್ದರೆ ಶರಣನಿಗೆ ಲಕ್ಷ್ಮಿ ತಾನೆಲ್ಲಾ ಕಡೆಗೆ ತೋರುತಿರ್ಪಳು ಎಂದು ಒಬ್ಬ ಶರಣ ವಚನದಲ್ಲಿ ಹೇಳಿದ್ದಾನೆ. ಸಂದೇಹ ಪಡದೆ ನಂಬಿಗೆಯಿಂದ ದೇವನಲ್ಲಿ ಬೇಡಿದರೆ ನೀ ಕೇಳಿದ ಪಡಿಪದಾರ್ಥಗಳು ತಾನೆ ತಾನಾಗಿ ನಿನ್ನೆಡೆಗೆ ಬರುವುದಂತು ಶತಸಿದ್ಧ.
ರಚನೆ ಮತ್ತುವಿವರಣೆ
ಎನ್.ಶರಣಪ್ಪ ಮೆಟ್ರಿ