ಧರೆಯೆಲ್ಲ ಕತ್ತಲಾವರಿಸಿದ್ದರೇನಾಯ್ತು ?
ಮುಖವೆತ್ತಿ ತಾರೆಗಳ ನೋಡಿ ನಲಿಯೊ
ಬಾಳಿನಲಿ ಬವಣೆಗಳು ತುಂಬಿದ್ದರೇನಾಯ್ತು ?
ನಸುನಗುತ ಬಾಳೆಲವೊ – ಎಮ್ಮೆತಮ್ಮ
ಶಬ್ಧಾರ್ಥ
ಧರೆ = ಭೂಮಿ. ತಾರೆ= ನಕ್ಷತ್ರ. ಬವಣೆ= ಕಷ್ಟ
ತಾತ್ಪರ್ಯ
ರಾತ್ರಿ ಹೊತ್ತಿನಲ್ಲಿ ಭೂಮಿಯ ಮೇಲೆ ಕಗ್ಗತ್ತಲು
ತುಂಬಿದರೇನಾಯ್ತು. ಕೆಳಗೆ ನೋಡುವ ಬದಲು ಕತ್ತೆತ್ತಿ
ಮೇಲೆ ನೋಡಿದರೆ ಶುಭ್ರ ಆಕಾಶದಲ್ಲಿ ಮಿಣಮಿಣನೆ
ಮಿಂಚುವ ನಕ್ಷತ್ರಗಳ ಗುಂಪು ಗೋಚರಿಸುತ್ತದೆ.ಅವುಗಳನ್ನು
ನೋಡಿ ಸಂತೋಷಪಡಬೇಕು. ಹಾಗೆ ಜೀವನದಲ್ಲಿ
ಅಜ್ಞಾನದಿಂದ ಅನೇಕ ಕಷ್ಟಗಳು ಬಂದರು ಎದೆಗುಂದದೆ
ಜ್ಞಾನ ಚಕ್ಷುವಿನಿಂದ ನೋಡಿದರೆ ನಮಗೆ ಆಶಾಕಿರಣ ಗೋಚರಿಸುತ್ತದೆ. ಕಷ್ಟಗಳು ಬರುವುದು ನಮ್ಮನ್ನು ಎಚ್ಚರಿಸಲಿಕ್ಕಾಗಿ ಅಥವಾ ಶಿಕ್ಷಣಕೊಡಲಿಕ್ಕಾಗಿ ಹೊರತು
ಶಿಕ್ಷಿಸಲಿಕ್ಕೆ ಅಲ್ಲ. ಬಂದದ್ದೆಲ್ಲ ಬರಲಿ ಗೋವಿಂದನ
ದಯವಿರಲಿ ಎನ್ನುವ ದಾಸರ ವಾಣಿಯಂತೆ ಭಗವಂತನಲ್ಲಿ
ನಂಬಿಗೆ ವಿಶ್ವಾಸ ಇಟ್ಟು ನಡೆದರೆ ಸೂರ್ಯ ಉದಯಿಸಲು
ಇಬ್ಬನಿ ಕರಗಿಹೋಗುವಂತೆ ತನ್ನಷ್ಟಕ್ಕೆ ತಾನೆ ಮಾಯವಾಗುತ್ತವೆ. ಕಷ್ಟ ಬಂದಾಗ ಕುಗ್ಗಿಹೋಗದೆ ಸಂತೋಷದಿಂದ ಎದುರಿಸಿದರೆ ಕಷ್ಟಗಳ ಸರಿದುಹೋಗುತ್ತವೆ.
ಕಷ್ಟಬಂತೆಂದು ಆತ್ಮಹತ್ಯೆ ಮಾಡಿಕೊಳ್ಳುವವರಿದ್ದಾರೆ. ಅದು
ಮಹಾಪಾಪ.ಕಾಲ ಬದಲಾಗುತ್ತದೆ. ಕಾದುನೋಡಬೇಕು.
ತಾಳಿದವನು ಬಾಳಿಯಾನು ಎಂಬ ಗಾದೆಯ ಮಾತಿದೆ.
ಅದನ್ನೆ ವಿಪರೀತವಾಗಿ ತಾಳದವನು ಹಾಳಾದಾನು ಎಂದು
ಹೇಳಬಹುದು.
ರಚನೆ ಮತ್ತುವಿವರಣೆ
ಎನ್.ಶರಣಪ್ಪ ಮೆಟ್ರಿ