ಗುಡುಗುಸಿಡಿಲುಗಳೊಮ್ಮೆ ಮೋಡಮಿಂಚುಗಳೊಮ್ಮೆ
ರವಿಯೊಮ್ಮೆ ಶಶಿಯೊಮ್ಮೆ ವರ್ಷವೊಮ್ಮೆ
ಮಳೆಬಿಲ್ಲು ಮತ್ತೊಮ್ಮೆ ತಾರೆಗಳು ಮಗುದೊಮ್ಮೆ
ಜೀವನದ ಬಾನಿನಲಿ – ಎಮ್ಮೆತಮ್ಮ
ಶಬ್ಧಾರ್ಥ
ರವಿ = ಸೂರ್ಯ. ಶಶಿ =ಚಂದ್ರ. ವರ್ಷ = ಮಳೆ
ಮಳೆಬಿಲ್ಲು = ಕಾಮನಬಿಲ್ಲು. ತಾರೆ = ಚುಕ್ಕಿ. ಬಾನು= ಗಗನ
ತಾತ್ಪರ್ಯ
ಈ ಪ್ರಕೃತಿಯಲ್ಲಿ ನಿತ್ಯ ಅನೇಕ ಬದಲಾವಣೆಗಳಾಗುತ್ತವೆ.
ಆಕಾಶದಲ್ಲಿ ಒಮ್ಮೆ ಗುಡುಗುತ್ತದೆ ಮತ್ತು ಸಿಡಿಲು ಹೊಡೆಯುತ್ತದೆ. ಮತ್ತೆ ಮೋಡಗಳು ಮಿಂಚುತ್ತವೆ.
ಒಮ್ಮೊಮ್ಮೆ ಹಗಲು ಸೂರ್ಯನುದಿಸುತ್ತಾನೆ , ರಾತ್ರಿ
ಚಂದ್ರನುದಿಸುತ್ತಾನೆ. ಮಳೆಯಾಗುತ್ತದೆ. ಮತ್ತೊಮ್ಮೆ
ಕಾಮನಬಿಲ್ಲು ಮೂಡುತ್ತದೆ. ಮಗುದೊಮ್ಮೆ ನಕ್ಷತ್ರಗಳು
ಕಾಣಿಸುತ್ತವೆ. ಹಾಗೆ ನಮ್ಮ ಜೀವನದಲ್ಲಿ ನಡೆಯುತ್ತವೆ.
ಏಕೆಂದರೆ ಯಥಾ ಬ್ರಹ್ಮಾಂಡ ತಥಾ ಪಿಂಡಾಂಡ.ಅನೇಕ
ಕಷ್ಟಕಾರ್ಪಣ್ಯವೆಂಬ ಗುಡುಗುಸಿಡಿಲುಗಳು,ಅಜ್ಞಾನ ಸುಜ್ಞಾನವೆಂಬ ಮೋಡಮಿಂಚುಗಳು, ಕೋಪವೆಂಬ
ಸೂರ್ಯ, ಶಾಂತಿಯೆಂಬ ಚಂದ್ರ, ಕರುಣೆಯೆಂಬ ಮಳೆಧಾರೆ, ಸಂತೋಷವೆಂಬ ಕಾಮನಬಿಲ್ಲು ಮನದಲ್ಲಿ ಮೂಡುವ ಅನೇಕ ಸಿಹಿನೆನಪುಗಳೆಂಬ ನಕ್ಷತ್ರಗಳು. ಕಷ್ಟಗಳು ಬಂದರೆ ಬಹಳ ದಿನ ಇರುವುದಿಲ್ಲ.ಮುಂದೆ ಒಳ್ಖೆಯ ದಿನಗಳುಬರುತ್ತವೆ. ಏನೇ ನಡೆದರು ಆಕಾಶ ಅವುಗಳನೆಲ್ಲ ಸಹಿಸಿಕೊಂಡು ನಿರ್ಮಲವಾಗಿ ಲವಲವಿಕೆಯಿಂದ ಇದೆ.ಹಾಗೆ ನಾವು ನಮ್ಮ ಜೀವನದಲ್ಲಿ ಸುಖವೇ ಬರಲಿ ದುಃಖವೇ ಬರಲಿ ಅವುಗಳನೆಲ್ಲ ಸಹಿಸಿಕೊಂಡು ಸ್ಥಿತಪ್ರಜ್ಞನಾಗಿ ಯೋಗಿಯಂತೆ ಬದುಕಬೇಕು.
ರಚನೆ ಮತ್ತುವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ. 9449030990