ಸಂತಸದಿ ನಗುವಾಗ ದುಃಖದಿಂದಳುವಾಗ
ಮನ ಹಗುರವಾಗುವುದು ನೀರು ಸುರಿದು
ದಿಟ್ಟಿಸುತ ಮೂರ್ತಿಯನು ಕಣ್ಣೀರನಿಳಿಸಿದರೆ
ಮನ ನಿರುಮ್ಮಳವಹುದು – ಎಮ್ಮೆತಮ್ಮ
ಶಬ್ಧಾರ್ಥ
ದಿಟ್ಟಿಸು = ನಿಟ್ಟಿಸು, ನಿರೀಕ್ಷಣೆ ಮಾಡು, ಕಣ್ಣಿಟ್ಟು ನೋಡು
ನಿರುಮ್ಮಳ = ನಿಶ್ಚಿಂತೆ, ಉಮ್ಮಳರಹಿತ, ದುಃಖರಹಿತ
ತಾತ್ಪರ್ಯ
ಆನಂದವಾದಾಗ ಕಣ್ಣ ಕಡೆಯಲ್ಲಿ ಸುಖದ ಪನ್ನೀರು ಇಳಿಯುತ್ತವೆ. ದುಃಖವಾದಾಗ ಕಣ್ಣ ಬುಡದಲ್ಲಿ (ಮೂಗಿನ
ತುದಿಯಲ್ಲಿ) ಕಣ್ಣೀರು ಇಳಿಯುತ್ತವೆ.ನಮ್ಮ ಮನಸ್ಸಿನ ಒತ್ತಡ ಕಳೆಯಲು ದೇವರು ಮಾಡಿದ ಒಂದು ಸರಳ ಉಪಾಯ.ಹೆಚ್ಚು ಸಂತೋಷವಾದರೆ ಮತ್ತು ಹೆಚ್ಚು ದುಃಖವಾದರೆ ಹೃದಯ ಸ್ತಂಭನವಾಗುವ ಅಪಾಯವುಂಟು.ಒಟ್ಟಾರೆ ಕಣ್ಣೀರು ಹೊರಹೋದರೆ ಒತ್ತಡ ತೊಲಗಿ ಮನಸುಹಗುರವಾಗುತ್ತದೆ. ಆದಕಾರಣ ಲಿಂಗಾಯತರು ಕಪ್ಪು ಲಿಂಗವನ್ನು ದಿಟ್ಟಿಸಿ ನೋಡುತ್ತ ಕಣ್ಣೀರನಿಳಿಸಿ ಆರೋಗ್ಯಕಾಪಾಡಿಕೊಳ್ಳುತ್ತಾರೆ. ಅದಕ್ಕಾಗಿ ಗುಡಿಯಲ್ಲಿ ದೇವರ ಮೂರ್ತಿಗಳು ಕಪ್ಪುಶಿಲೆಯಲ್ಲಿ ಇರುತ್ತವೆ. ಅವನ್ನು ನಿಟ್ಟಿಸಿನೋಡುವುದೆ ದರ್ಶನ. ಹಾಗೆ ನೋಡುತ್ತ ಹೋದಂತೆ ಕಣ್ಣೀರಿಳಿದು ಲಿಂಗ ಅಥವಾ ಮೂರ್ತಿಯಿಂದ ವಿಶ್ವಶಕ್ತಿಯ ಕಿರಣಗಳು ಕಣ್ಣ ಮುಖಾಂತರ ಫೀನಿಯಲ್ ಗ್ರಂಥಿ ಮತ್ತು ಪಿಟ್ಯೂಟರಿ ಗ್ರಂಥಿಯಲ್ಲಿ ಸೇರಿ ರಸ ಬಿಡುಗಡೆಯಾಗಿ ಆರೋಗ್ಯ ಮತ್ತು ಆನಂದವನ್ನು ತಂದುಕೊಡುತ್ತದೆ. ಅದನ್ನೆ ಶರಣರು ಪಾದೋದಕ ಪ್ರಸಾದ ಎಂದು ಕರೆದರು.
ರಚನೆ ಮತ್ತುವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ. 9449030990