ಪರರ ಕಷ್ಟವ ಕಂಡು ಕರಗುವೆದೆಯೊಂದುಂಟು
ಸಂತೈಸುವಂಥೆರಡು ನುಡಿಗಳುಂಟು
ಒಳಿತಾಗಲೆಂದೆಂಬ ಮತ್ತೊಂದು ಮನವುಂಟು
ಸಜ್ಜನನೆ ಸರ್ವೇಶ – ಎಮ್ಮೆತಮ್ಮ
ಶಬ್ಧಾರ್ಥ
ಸಂತೈಸು = ಸಮಾಧಾನಪಡಿಸು. ಸಜ್ಜನ = ಒಳ್ಳೆಯವನು
ಸರ್ವೇಶ = ಪರಮೇಶ, ಜಗದೀಶ.
ತಾತ್ಪರ್ಯ
ನಿಜವಾದ ಮನುಷ್ಯನ ಮೂರು ಉತ್ತಮ ಗುಣಗಳನ್ನು
ಈ ಕಗ್ಗ ಉಸುರುತ್ತದೆ ಮತ್ತು ಉಸಿರಾಡುತ್ತದೆ.
ಇನ್ನೊಬ್ಬರ ಕಷ್ಟಗಳನ್ನು ಕಂಡು ಹೃದಯ ಕರಗಿ ಅವರಿಗೆ
ಸಹಾಯ ಮಾಡುವ ಗುಣವುಳ್ಳವನೆ ನಿಜವಾದ
ಮಾನವ. ಬರಿ ಮಾನವನಲ್ಲ ಮಹಾಮಾನವ. ಅವರ ದುಃಖಗಳನ್ನು ಹೋಗಲಾಡಿಸಲಿಕ್ಕೆ ಅವರಲ್ಲಿ ಧೈರ್ಯ ತುಂಬುವ ಮತ್ತು ಸಮಾಧಾನದ ಮಾತುಗಳನ್ಮು ಹೇಳುವ
ಇನ್ನೊಂದು ಗುಣವುಳ್ಳವನೆ ನಿಜವಾದ ಮನುಷ್ಯ. ಬರಿ
ಮನುಷ್ಯನಲ್ಲ ದೇವತಾ ಮನುಷ್ಯ. ಮತ್ತು ಅವರಿಗೆ ಒಳ್ಳೆಯದಾಗಲಿ ಎಂದು ಬಯಸುವ ಮತ್ತೊಂದು ಮನವುಳ್ಳವನೆ ನಿಜವಾದ ಮಹಾತ್ಮ.ಬರಿ ಮಹಾತ್ಮನಲ್ಲ ಮಹಾದೇವ. ಇಂಥ ಮೂರು ಗುಣವುಳ್ಳವರು ನಿಜವಾಗಿ
ಈ ಭೂಮಿಗವತರಿಸಿದ ಮಹಾತ್ಮರ ರೂಪದಲ್ಲಿರುವ
ದೇವಮಾನವರು. ಬರಿ ದೇವಮಾನವರಲ್ಲ ಎಲ್ಲರನ್ನು
ಕಾಪಾಡುವ ಸಾಕ್ಷಾತ್ ಪರಮಾತ್ಮನೆ. ಮಾನವೀಯತೆಯ
ಗುಣಗಳುಳ್ಳವರು ದೇವಪುರುಷರು .ಬರಿ ದೇವಪುರುಷರಲ್ಲದಯೆ ಕರುಣೆ ಅನುಕಂಪವುಳ್ಳ ದೇವರು. ಇಂಥವರ ಸಂತತಿ ಸಾವಿರಲ್ಲ ಲಕ್ಷವಲ್ಲ ಕೋಟಿಗಟ್ಟಲೆ ಬೆಳೆಯಬೇಕಾಗಿದೆ.
ರಚನೆ ಮತ್ತುವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ. 9449030990