ಅವರಿವರ ದೋಷಗಳನೆಣಿಸಿ ದೂಷಿಸಬೇಡ
ನಿನ್ನ ಗುಣದೋಷಗಳ ತಿಳಿದುನೋಡು
ಜನರ ತಪ್ಪನುಕಂಡು ತೆಪ್ಪಗಿರುವುದೆ ಲೇಸು
ಶಾಂತಿಗಿದೆ ಸನ್ಮಾರ್ಗ- ಎಮ್ಮೆತಮ್ಮ
ಶಬ್ಧಾರ್ಥ
ದೋಷ = ಕೆಟ್ಟಗುಣ. ತೆಪ್ಪಗೆ = ಸುಮ್ಮನೆ.
ಸನ್ಮಾರ್ಗ = ಒಳ್ಳೆಯ ಮಾರ್ಗ
ತಾತ್ಪರ್ಯ
ಇನ್ನೊಬ್ಬರ ಕೆಟ್ಟಗುಣಗಳನ್ನು ಕಂಡು ನಿಂದಿಸಬೇಡ.
ಮೊದಲು ನಿನ್ನಲ್ಲಿರುವ ಗುಣದೋಷಗಳ ತಿಳಿದುಕೊಂಡು
ತಿದ್ದಿಕೊಳ್ಳಬೇಕು. ಲೋಕವನ್ನು ತಿದ್ದಲು ಲೋಕನಾಥನಿಗೆ
ಸಾಧ್ಯವಾಗಿಲ್ಲ. ಹಾವಿಗೆ ಹಾಲೆರೆದಷ್ಟು ಅದು ವಿಷವನ್ನು
ಉತ್ಪತ್ತಿಮಾಡುತ್ತದೆ. ಹಾಗೆ ಬುದ್ಧಿವಾದದ ಮಾತು ಹೇಳಿದರೆ
ಅವರ ಕೋಪ ಹೆಚ್ಚಾಗುತ್ತದೆ ಹೊರತು
ಶಾಂತವಾಗುವುದಿಲ್ಲ. ಅವರು ನಿನ್ನ ವೈರಿಯೆಂದು ಭಾವಿಸಿ ನಿನಗೆ ಅಪಾಯ ತಂದೊಡ್ಡುವ ಸಾಧ್ಯತೆಗಳುಂಟು. ಆದಕಾರಣ ಅವರ ದುರ್ಗುಣಗಳನ್ನು ಬಯಲಿಗೆಳೆದರೆ ನಿನ್ನ ಶಾಂತಿಗೆ ಭಂಗವುಂಟುಮಾಡುತ್ತಾರೆ. ನಿನ್ನ ಮನಸಿಗೆ ಶಾಂತಿಬೇಕಾದರೆ ಸುಮ್ಮನಿರುವುದು ಲೇಸು. ಅದಕ್ಕೆ ತತ್ತ್ವಪದಕಾರರು ಮೂಕನಾಗಿರಬೇಕು ಲೋಕದೊಳು ಜ್ವಾಕ್ಯಾಗಿರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಯಾರು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ. ಆಗ ಅವರಿಗೆ ಮಾನಸಿಕ ಒತ್ತಡ ಹೆಚ್ಚಾಗಿ ಆರೋಗ್ಯ ಕೆಟ್ಟು ಹೋಗುತ್ತದೆ. ಜಾಣನಾದವನು ತನ್ನ ತಪ್ಪನ್ನು ಒಪ್ಪಿಕೊಂಡು ತಿದ್ದಿಕೊಂಡು ಬಿಡುಗಡೆ ಹೊಂದುತ್ತಾನೆ. ಮತ್ತು ಆರೋಗ್ಯದಿಂದ ಬದುಕುತ್ತಾನೆ. ಒಪ್ಪಿಕೊಳ್ಳದಿದ್ದರೆ ಬಂಧನ ಒಪ್ಪಿಕೊಂಡರೆ ಮೋಕ್ಷ . ಇದನ್ನು ಅರ್ಥಮಾಡಿಕೊಂಡವ ಜಾಣ , ಮಾಡಿಕೊಳ್ಳದವ ಮೂರ್ಖ.
ರಚನೆ ಮತ್ತುವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ. 9449030990