ಗ್ರಹಗತಿಯ ನಡೆಸುವುದು ತಾರೆಗಳ ಹೊಳೆಸುವುದು
ಸೂರ್ಯಚಂದ್ರಾದಿಗಳ ಬೆಳಗಿಸುವುದು
ಸಸ್ಯಸಂಕುಲ ಜೀವರಾಶಿಗಳ ಬೆಳೆಸುವುದು
ದೈವದದ್ಭುತ ಲೀಲೆ – ಎಮ್ಮೆತಮ್ಮ
ಶಬ್ಧಾರ್ಥ
ಗ್ರಹಗತಿ = ಗ್ರಹಗಳ ಚಲನೆ. ತಾರೆ = ಚುಕ್ಕಿ.ಸಂಕುಲ = ಗುಂಪು ರಾಶಿ = ಗುಂಪು. ಲೀಲೆ = ಆಟ, ವಿಲಾಸ
ತಾತ್ಪರ್ಯ
ಆಕಾಶದಲ್ಲಿರುವ ಗ್ರಹಗಳನ್ನು ಸೂರ್ಯನ ಸುತ್ತ ಮತ್ತು
ತನ್ನ ಸುತ್ತ ಸುತ್ತುವಂತೆ ಮಾಡುತ್ತಿದೆ. ಅಸಂಖ್ಯಾತ ನಕ್ಷತ್ರಗಳನ್ನು ಮಿಣಮಿಣ ಮಿನುಗುವಂತೆ ಮಾಡುತ್ತಿದೆ. ಸೂರ್ಯ ಮತ್ತು ಚಂದ್ರರನ್ನು ಬೆಳಗುವಂತೆ ಮಾಡುತ್ತಿದೆ.
ಬ್ರಹ್ಮಾಂಡದಲ್ಲಿರುವ ಕೋಟಿಗಟ್ಟಲೆ ಆಕಾಶಕಾಯಗಳನ್ನು
ಅಂತರದಲ್ಲಿ ನಿಲ್ಲುವಂತೆ ಮಾಡುತ್ತಿದೆ. ಮಳೆತರಿಸಿ ಗಾಳಿ
ಬೀಸಿ ಸೂರ್ಯನ ಬೆಳಕು ಹರಿಸಿ ಅಸಂಖ್ಯಾತ ಗಿಡಮರ ಬಳ್ಳಿಗಳನ್ನು ಬೆಳೆಯುವಂತೆ ಮಾಡುತ್ತಿದೆ. ಭೂಮಿ ಮತ್ತು
ಸಮುದ್ರದಲ್ಲಿಯ ಜೀವಜಂತು ಪಶುಪಕ್ಷಿಪ್ರಾಣಿ
ಉರಗಸರಿಸೃಪ, ಕ್ರಿಮಿಕೀಟ, ಮರ್ಕಟಮಾನವರಿಗೆ ಆಹಾರ ನೀರು ಕೊಟ್ಟು ರಕ್ಷಿಸುತ್ತಿದೆ. ಇವೆಲ್ಲ ಕಾರ್ಯಗಳನ್ನು ಒಂದು ಅದ್ಭುತ ಶಕ್ತಿ ಕಣ್ಣಿಗೆ ಗೋಚರಿಸದಂತೆ ಮಾಡುತ್ತಿದೆ.
ಅದು ಇಡೀ ಬ್ರಹ್ಮಾಂಡವನ್ನು ವ್ಯಾಪಿಸಿ ಓತೋಪ್ರೋತವಾಗಿ
ತುಂಬಿಕೊಂಡಿದೆ. ಬ್ರಹ್ಮಾಂಡದಲ್ಲಿ ಅಪರಿಮಿತ ಶಕ್ತಿ ತುಂಬಿದೆ. ಆ ಶಕ್ತಿಯೆ ದೇವರು. ಅವನು ಮಾಡುವ ಅದ್ಭುತ ಕ್ರಿಯೆ ಅವನ ಲೀಲಾವಿಲಾಸ. ಅವನು ನಮ್ಮ ಹೊರಗೂ ಒಳಗೂ ಇದ್ದು ನಮ್ಮ ದೈಹಿಕ ಬಾಹ್ಯಾಂತರ ಚಟುವಟಿಕೆಗಳನ್ನು ನಡೆಸುತ್ತಾನೆ.ಅವನು ಭಾವಕ್ಕೆ ಗಮ್ಯವೆ ಹೊರತು ಕಣ್ಣಿಗೆ ಕಾಣಿಸುವುದಿಲ್ಲ. ಅವನನ್ನು ತಿಳಿಯುವುದೇ ಅಧ್ಯಾತ್ಮ
ರಚನೆ ಮತ್ತು ವಿವರಣೆ ಎನ್. ಶರಣಪ್ಪ ಮೆಟ್ರಿ, 9449030990