ಪಾಪಗಳ ಮಾಡದಪ್ಪಗಳಾರು ಲೋಕದಲಿ ?
ಪಾಪ ಮಾಡಿದೆನೆಂಬ ಚಿಂತೆಯೇಕೆ ?
ಪಾಪಿ ಪಶ್ಚಾತ್ತಾಪಪಟ್ಟಂದು ತೊಲಗೀತು
ಅದಕಿಂತ ತಪವಿಹುದೆ ? – ಎಮ್ಮೆತಮ್ಮ
ಶಬ್ಧಾರ್ಥ
ತಪ = ತಪಸ್ಸು
ತಾತ್ಪರ್ಯ
ಈ ಜಗತ್ತಿನಲ್ಲಿ ಪಾಪಮಾಡದ ಮಾನವರು ಯಾರು ಇಲ್ಲ.
ಎಲ್ಲರು ಒಂದಿಲ್ಲೊಂದು ಪಾಪ ಮಾಡಿದವರೆ. ತಪ್ಪು ಮಾಡಿ
ಅಪರಾಧ ಭಾವನೆಯಿಂದ ಚಿಂತೆಮಾಡಬಾರದು. ಆದರೆ
ತಿಳಿಯದೆ ಮಾಡಿದ ತಪ್ಪನ್ನು ಒಪ್ಪಿಕೊಂಡುಬಿಟ್ಟರೆ ಅಥವಾ
ಪರಿತಾಪಪಟ್ಟರೆ ಅದರಿಂದ ಬಿಡುಗಡೆ ಪಡೆಯಬಹುದು.
ಪಶ್ಚಾತ್ತಾಪ ಪಟ್ಟರೆ ಅದು ಅಂತರಂಗ ಪರಿಶುದ್ಧಗೊಳಿಸುವ
ತಪಸ್ಸಾಗಿ ಬಿಡುತ್ತದೆ . ಅದಕಿಂತ ಬೇರೆ ತಪಸ್ಸಿಲ್ಲ.
ಇದಕ್ಕೆ ಉದಾಹರಣೆಯಾಗಿ ಬೈಬಲ್ ನಲ್ಲಿ ಒಂದು ಕಥೆ
ಬರುತ್ತದೆ. ಒಬ್ಬ ವೇಶ್ಯೆಯನ್ನು ಕೆಲವು ಪುರೋಹಿತರು ಪಾಪಿ ಎಂದು ಕಲ್ಲಿನಿಂದ ಹೊಡೆಯುತ್ತಿದ್ದರು. ಆಗ ಅಲ್ಲಿಗೆ ಬಂದ ಏಸು ಆಕೆಗೆ ಪಾಪಿಗಳಲ್ಲದವರು ಕಲ್ಲು ಹೊಡೆಯಿರಿ ಎಂದಾಗ ಎಲ್ಲರು ಹೊರಟುಹೋಗುತ್ತಾರೆ. ಅಂದರೆ ಎಲ್ಲರು ಪಾಪಿಗಳೆ.ಆಗ ಏಸು ಆಕೆಯನ್ನು ಕ್ಷಮಿಸುತ್ತಾನೆ. ಆಕೆ ಏಸುವಿನ ಶಿಷ್ಯಳಾಗುತ್ತಾಳೆ.
ಮತ್ತೊಂದು ಬುದ್ಧನ ಜೀವನದಲ್ಲಿ ಬರುತ್ತದೆ. ಮಹಾಕೋಪಿ ಅಂಗುಲಿಮಾಲ ನೂರು ಜನರ ಕೊಲೆ ಮಾಡಿರುತ್ತಾನೆ. ಅವರ ಬೆರಳಿನ ಸರಮಾಡಿ ಕೊರಳಿನಲ್ಲಿ ಧರಿಸಿರುತ್ತಾನೆ. ಹಾಗೆ ಬುದ್ಧನನ್ನು ಕೊಲ್ಲಲು ಹೋಗಿ ಆತನ ಅಪಾರ ಕರುಣೆಗೆ ಬೆರಗಾಗಿ ಕೊಲೆ ಮಾಡಿದ್ದಕ್ಕೆ ಪಶ್ಚಾತ್ತಾಪಪಟ್ಟು ಬುದ್ಧನ ಶಿಷ್ಯನಾತ್ತಾನೆ.
ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ. 9449030990