ದೇವಗುರುಹಿರಿಯರಲಿ ಭಕ್ತಿಗೌರವವಿರಲಿ
ಇಂದ್ರಿಯಂಗಳ ಮೇಲೆ ಹಿಡಿತವಿರಲಿ
ದೇಹ ಶುಚಿಯಾಗಿರಲಿ ಸರಳ ನಡೆನುಡಿಯಿರಲಿ
ದೈಹಿಕ ತಪಸ್ಸಿದುವೆ – ಎಮ್ಮೆತಮ್ಮ
ಶಬ್ಧಾರ್ಥ
ಇಂದ್ರಿಯಂಗಳು = ೫ ಜ್ಞಾನೇಂದ್ರಿಯ, ೫ ಕರ್ಮೇಂದ್ರಿಯ
ತಾತ್ಪರ್ಯ
ತ್ರಿಕರಣಗಳಲ್ಲಿ ಮೊದಲನೆಯದು ಕಾಯಶುದ್ಧಿಯ ಕುರಿತು
ಈ ಕಗ್ಗ ಚರ್ಚಿಸುತ್ತದೆ. ಮೊದಲು ದೇವರಲ್ಲಿ ನಂಬಿಕೆ, ವಿಶ್ವಾಸ, ಶ್ರದ್ಧೆಭಕ್ತಿಯಿರಬೇಕು. ದೇವರ ಧ್ಯಾನಪೂಜೆ, ಜಪತಪ, ನಾಮಸ್ಮರಣೆ ಕೀರ್ತನೆ ಮಾಡಬೇಕು. ಆನಂತರ ತಂದೆತಾಯಿ ಗುರುಹಿರಿಯರಲ್ಲಿ ಗೌರವಾದರಗಳಿರಬೇಕು. ಅವರ ಸೇವೆಯನ್ನು ಮಾಡಬೇಕು.ಏಕೆಂದರೆ ಅವರಲ್ಲಿ ದೇವನ ವಾಸವಿರುತ್ತದೆ. ಅವರು ಸಂತೋಷದಿಂದ ಹರಸಿದರೆ ಬಾಳಿಗೆ ಬೆಳಕಾಗುತ್ತದೆ.
ದೇಹದಲ್ಲಿರುವ ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮ, ವಾಕ್(,ಬಾಯಿ), ಪಾದ (ಕಾಲು), ಪಾಣಿ(ಕೈ), ಪಾಯು (ವಿಸರ್ಜನಾಂಗಗಳು) ಉಪಸ್ತ (ಜನನಾಂಗ) ಈ ಹತ್ತು ಇಂದ್ರಿಯಗಳ ಮೇಲೆ ನಿಯಂತ್ರಣವಿರಬೇಕು. ದಿನ ನಿತ್ಯ ಸ್ನಾನ ಮಾಡುತ್ತ ದೇಹವನ್ನು ಶುಚಿಯಾಗಿಡಬೇಕು.ಶುಭ್ರವಾದ ಬಟ್ಟೆ ಧರಿಸಿ ಆಡಂಬರವಿರದಂತೆ ಸರಳವಾಗಿ ಬದುಕಬೇಕು. ಶುದ್ಧವಾದ ಆಚಾರವಿಚಾರ ನಡತೆಯಿರಬೇಕು. ಮೃದುಮಧುರವಾದ ಮಾತುಗಳಿರಬೇಕು. ನುಡಿದಂತೆ ನಡೆಯಬೇಕು ಮತ್ತು ನಡೆದಂತೆ ನುಡಿಯಬೇಕು. ನಡೆದಂತೆ ನುಡಿ ನುಡಿದಂತೆ ನಡೆ ಇದೆ ಜನ್ಮ ಕಡೆ ಎಂದು ಶರಣರು ಹೇಳಿದಂತೆ ಬದುಕಿನಲ್ಲಿ ಅಳವಡಿಸಿಕೊಂಡರೆ ಅದುವೆ ದೈಹಿಕ ತಪಸ್ಸಾಗುತ್ತದೆ.
ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ. 9449030990