ಆಡುವರು ಮರಳಿನಲಿ ಮನೆಕಟ್ಟಿ ಬಾಲಕರು
ಖುಷಿಯಿಂದ ಹೋಗುವರು ಕೆಡಿಸಿ ಕೊನೆಗೆ
ಲೀಲೆಯಿಂದಾಡುವನು ವಿಧಿ ಹೀಗೆ ಲೋಕದಲಿ
ಕಟ್ಟುವನು ಕೆಡಹುವನು – ಎಮ್ಮೆತಮ್ಮ
ಶಬ್ಧಾರ್ಥ
ವಿಧಿ – ಬ್ರಹ್ಮ,ಅಥವಾ ಭಗವಂತ
ತಾತ್ಪರ್ಯ
ಮಕ್ಕಳು ಉಸುಕಿನಲ್ಲಿ ಖುಷಿಯಿಂದ ಉಸುಕಿನ ಗೂಡು
ಕಾಲಿನಿಂದ ಕಟ್ಟಿನಿಲ್ಲಿಸಿ ಆಡುತ್ತಾರೆ. ಹಾಗೆಯೆ ಸಾಕಾಯ್ತೆಂದರೆ ಅದನ್ನು ಖುಷಿಯಿಂದಲೆ ಕೆಡಿಸಿ ಹೊರಡುವರು.ಆಡುವುದು, ನೋಡುವುದು ಮತ್ತು ಕೆಡಿಸುವುದು ಮಕ್ಕಳಿಗೆ ಸಂತೋಷಕರ ಆಟವಾಗಿದೆ.ಹಾಗೆ ಭಗವಂತ ತನ್ನ ವಿನೋದಕ್ಕಾಗಿ ಜಗತ್ತು ನಿರ್ಮಾಣ ಮಾಡುತ್ತಾನೆ. ತನಗೆ ಸಾಕಾಯ್ತೆಂದರೆ ತನ್ನ ವಿನೋದಕ್ಕಾಗಿ ಅದನ್ನು ನಾಶ ಮಾಡುತ್ತಾನೆ . ಹಾಗೆ ನಮ್ಮನ್ನು ಹುಟ್ಟಿಸುತ್ತಾನೆ ಸಲುಹುತ್ತಾನೆ ಮತ್ತು ಕೊನೆಗೆ ಕೊಲ್ಲುತ್ತಾನೆ. ಸೃಷ್ಟಿ ಸ್ಥತಿ ಲಯ ಅವನಿಗೆ ಒಂದು ಸಂತೋಷದಾಯಕ ಆಟವಾಗಿದೆ. ಈ ಬ್ರಹ್ಮಂಡವೆಲ್ಲ ಅವನ ನಿಯಂತ್ರಣದಲ್ಲಿದೆ. ಹಾಗೆ ನಾವು ಕೂಡ ಅವನ ನಿಯಂತ್ರಣಕ್ಕೊಳಪಟ್ಟಿದ್ದೇವೆ.
ಭಗವಂತನೆಂದರೆ ನಮ್ಮಆತ್ಮ ಚೈತನ್ಯದ ಸುಪ್ತಮನಸ್ಸು.
ಅದು ನಮಗರಿವಿಲ್ಲದಂತೆ ಈ ದೇಹವನ್ನುಸೃಷ್ಟಿಮಾಡುತ್ತದೆ.
ಸದಾ ಕಾಲ ನಾವು ಮಲಗಿದಾಗಲು ಕಾಪಾಡುತ್ತದೆ. ಆ ಸುಪ್ತ ಪ್ರಜ್ಞೆಗೆ ನಾವು ಸಕಾರಾತ್ಮಕ ಭಾವನೆಗಳನ್ನು ತುಂಬಿದರೆ ಒಳಿತನ್ನು ನಕಾರಾತ್ಮಕ ಭಾವನೆಗಳನ್ನು ತುಂಬಿದರೆ ಕೆಡಕನ್ನು ಮಾಡುತ್ತದೆ. ಆ ಸುಪ್ತಮನಸ್ಸೆ ದೇವರು. ಅದಕ್ಕೆ ನಾವು ನಕಾರಾತ್ಮಕ ತುಂಬಿದರೆ ರೋಗವನ್ನುಂಟುಮಾಡಿ ದೇಹವನ್ನು ನಾಶಮಾಡುತ್ತದೆ. ಆದಕಾರಣ ಸಕಾರಾತ್ಮಕವಾಗಿ ಯೋಚಿಸಿ
ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ