ಮಂಗದಿಂ ಮಾನವನು ಜನಿಸಿಬಂದೆನ್ನುವರು
ಈಗಿರುವ ಮಂಗದಿಂ ಜನಿಸನೇಕೆ ?
ಮಂಗ ಮಾನಸದಿಂದ ಮನುಜ ಮಾನಸವೆಂಬ
ಸಿದ್ಧಾಂತ ಸರಿಯೇನೋ ! – ಎಮ್ಮೆತಮ್ಮ
ಶಬ್ಧಾರ್ಥ
ಮಂಗ = ಕೋತಿ. ಮಾನಸ = ಮನ. ಮನುಜ = ಮಾನವ
ಸಿದ್ಧಾಂತ = ತತ್ವ ನಿರ್ಣಯ
ತಾತ್ಪರ್ಯ
ಇಂಗ್ಲೆಂಡ್ ದೇಶದ ಜೀವವಿಜ್ಞಾನಿ ಚಾರ್ಲ್ಸ್ ರಾಬರ್ಟ್ ಡಾರ್ವಿನ್ ಜೀವವಿಕಾಸವಾದದ ಪ್ರಕಾರ ಕೋತಿಯಿಂದ ಬೆಳವಣಿಗೆಯಾಗಿ ಮನುಷ್ಯನಾದ ಎಂದು ಮಂಡಿಸಿದನು.
ಅವನು ಮಂಡಿಸಿದ ಪ್ರಕಾರ ಈಗ ಇರುವಂಥ ಕೋತಿಗಳಿಂದ ಮಾನವನು ಜನಿಸಿತ್ತಿಲ್ಲವೇಕೆ ? ಅದು ಸರಿ ಇರಬಹುದು ಅಥವಾ ತಪ್ಪು ಇರಬಹುದು. ಅದೇನೆ ಇರಲಿ ಮಾನವನ ಮನಸ್ಸು ಮೊದಮೊದಲು ಕೋತಿಯಂತೆ ಅಂತಿಂದಿತ್ತಇತ್ತಿಂದತ್ತ ಚಲಿಸುವುದಂತು ಸತ್ಯ. ಮಾನವನ ಮನಸ್ಸು ಕೋತಿಯಂತೆ ಚಂಚಲ. ಆದರೆ ಅದೇ ಮನಸ್ಸನ್ನು
ಪಳಗಿಸಿ ಏಕಾಗ್ರಗೊಳಿಸಿದರೆ ಸಿದ್ಥಿ ಸಾಧನೆ ಗಳಿಸಬಹುದು.
ಆಗ ಮಂಗ ಮಾನಸ ಹೋಗಿ ಮನುಜ ಮಾನಸವಾಗಿ
ಮತ್ತೆ ದೇವ ಮಾನಸವಾಗಬಲ್ಲದು. ಅದನ್ನೆ ಷಣ್ಮುಖ ಶಿನಯೋಗಿಗಳು…
“ಮನವೆಂಬ ಮರ್ಕಟನು ತನುವೆಂಬ ವೃಕ್ಷವನೇರಿ ಇಂದ್ರಿಯಂಗಳೆಂಬ ಶಾಖೆಶಾಖೆಗೆ ಹಾರಿ ವಿಷಯಂಗಳೆಂಬ ಹಣ್ಣು ಫಲಂಗಳ ಗ್ರಹಿಸಿ ಭವದತ್ತ ಮುಖವಾಗಿ ಹೋಗುತ್ತಿದೆ ನೋಡಾ ! ಈ ಮನವೆಂಬ ಮರ್ಕಟನ ನಿಮ್ಮ ನೆನಹೆಂಬ ಪಾಶದಲ್ಲಿ ಕಟ್ಟಿ ಎನ್ನನುಳುಹಿಕೊಳ್ಳಯ್ಯ ಅಖಂಡೇಶ್ವರಾ.”
ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990