ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

0
123

 

ಜೈಲಿನಲಿ ಬಂಧಿಯಾಗಿರುವೆಲ್ಲ ಕೈದಿಗಳು
ಕತ್ತಲೆಯ ಕೋಣೆಯಲಿ ದುಃಖಿಸುತಿರೆ
ಕೈದಿಯೊಬ್ಬನು ಚುಕ್ಕಿ ನೋಡಿ ನಲಿಯುವ ಹಾಗೆ
ಬುವಿಯೊಳಾನಂದದಿರು – ಎಮ್ಮೆತಮ್ಮ

ಶಬ್ಧಾರ್ಥ
ಬುವಿ = ಭೂಮಿ

ತಾತ್ಪರ್ಯ
ಸೆರೆಮನೆಯಲ್ಲಿ‌‌ ಬಂಧನಕ್ಕೀಡಾದ ಕೈದಿಗಳು‌ ರಾತ್ರಿ ಕತ್ತಲೆ
ಕೋಣೆಯಲ್ಲಿ ನಿದ್ರೆ ಬಾರದೆ ದುಃಖಿಸುತ್ತಾರೆ.‌ಆದರೆ
ಅವರಲ್ಲಿ ಒಬ್ಬನು ಜಾಣ ಮಾತ್ರ ಕಂಬಿಯ‌ ಮುಖಾಂತರ
ಗಗನದಲ್ಲಿ ಮಿನುಗುವ ನಕ್ಷತ್ರಗಳನ್ನು‌ ನೋಡಿ
ಸಂತೋಷಪಡುತ್ತಾನೆ. ಹಾಗೆ ನಾವು ಸಂಸಾರವೆಂಬ‌
ಬಂಧಿಖಾನೆಯಲ್ಲಿ‌ ಬಂಧನಕ್ಕೀಡಾಗಿ ಅಜ್ಞಾನದಿಂದ
ದುಃಖಮಾಡುತ್ತೇವೆ. ನಿಜವಾಗಿ ಜಾಣರಾದ‌
ಮಹಾತ್ಮರು ದೇವನನ್ನು‌ ಧ್ಯಾನಿಸುತ್ತ‌ ಪರಮಾನಂದ
ಸುಖದಲ್ಲಿ ಇರುತ್ತಾರೆ. ಹಾಗೆ ನಾವು ಈ ಭೂಮಿಗೆ
ಹಿಂದಿನ ಜನ್ಮದಲ್ಲಿ ಏನೋ ತಪ್ಪು ಮಾಡಿ‌ ಅದರ ಶಿಕ್ಷೆ
ಅನುಭವಿಸಲು ಬಂದಿದ್ದೇವೆ. ಇದು ಶಿಕ್ಷೆಯಲ್ಲ
ಶಿಕ್ಷಣವೆಂದು ತಿಳಿದು ಒಳ್ಳೆ ರೀತಿಯಿಂದ ಬದುಕಬೇಕು.
ಖೈದಿ ಒಳ್ಳೆ ರೀತಿಯಿಂದ ನಡೆದುಕೊಂಡರೆ ಶಿಕ್ಷೆ ಕಡಿಮೆ
ಮಾಡಿ ಬಿಡುಗಡೆ ಮಾಡುತ್ತಾರೆ. ಹಾಗೆ ನಾವು ದುಃಖ
ಮರೆತು ಖುಷಿ ಖುಷಿಯಿಂದ ಒಳ್ಳೆ ಕೆಲಸ‌ ಮಾಡಿದರೆ
ಶಿಕ್ಷೆ ಕಡಿಮೆಯಾಗುತ್ತದೆ ಮತ್ತು ಬೇಗನೆ ಬಿಡುಗಡೆ
ದೊರಕುತ್ತದೆ ಅಂದರೆ ಮೋಕ್ಷ ದೊರಕುತ್ತದೆ.
ಆ ಖೈದಿಯಂತೆ ಬದುಕಿನಲ್ಲಿ‌ ಆಶಾಕಿರಣ ‌ಇಟ್ಟುಕೊಂಡು ಬದುಕಬೇಕು.

ರಚನೆ ಮತ್ತು ವಿವರಣೆ ‌‌ ‌‌‌ ಎನ್.ಶರಣಪ್ಪ‌ ಮೆಟ್ರಿ
ಮೊ. 9449030990