ಯಾವ ದೇಶದಿ ಬೆಳೆದ ಹಣ್ಣಾದರೇನಂತೆ?
ಕಚ್ಚಿ ತಿಂದದರ ಸವಿರುಚಿಯ ನೋಡು
ಕವಿಕಾಲಮತಭಾಷೆದೇಶಗಳ ಗಣಿಸದೆಯೆ
ಸತ್ಕಾವ್ಯಗಳನೋದು – ಎಮ್ಮೆತಮ್ಮ
ಶಬ್ಧಾರ್ಥ
ಗಣಿಸು = ಎಣಿಸು. ಸತ್ಕಾವ್ಯ = ಉತ್ತಮ ಕಾವ್ಯ
ತಾತ್ಪರ್ಯ
ಸವಿಯಾದ ಹಣ್ಣು ಯಾವ ದೇಶದಲ್ಲಿ ಬೆಳೆದರೇನು ? ಯಾರು
ಬೆಳೆಸಿದರೇನು? ಅದನ್ನು ತಿಂದು ರುಚಿ ನೋಡಬೇಕು. ತಿಂದು
ಸಂತೃಪ್ತಿ ಹೊಂದಿ ಸಂತೋಷಪಡಬೇಕು. ಹಾಗೆ ಉತ್ತಮ ಕಾವ್ಯವನ್ನು ಯಾವ ಕವಿ ಬರೆದರೇನು ? ಯಾವ ಕಾಲದಲ್ಲಿ ಬರೆದೇನು? ಯಾವ ಧರ್ಮೀಯನಾದರೇನು ? ಯಾವ ಭಾಷೆಯಲ್ಲಿ ಬರೆದರೇನು ? ಯಾವ ದೇಶದಲ್ಲಿ ಬರೆದರೇನು ?
ಮಾನವೀಯ ಮೌಲ್ಯಗಳನ್ನು ಮಾನವ ಕುಲಕ್ಕೆ ಸಾರುವ
ಕಾವ್ಯಗಳನ್ನು ಓದಬೇಕು. ಅಂಥ ಕಾವ್ಯಗಳು ಮಾನವ
ಕುಲಕ್ಕೆ ಕೊಟ್ಟ ಕೊಡುಗೆಗಳು. ಕಾವ್ಯದ ಭಾಷೆ ದೇಶಕಿಂತ
ಅದರಲ್ಲಿರುವ ಮಾನವನ ಭಾವನೆಗಳು ಬಹಳ ಮುಖ್ಯ.
ಹೃದಯಗಳನ್ನು ಬೆಸೆಯುವ ಕಾವ್ಯಗಳು ಸರ್ವ ಕಾಲಕ್ಕು
ಸಲ್ಲುತ್ತವೆ. ರಸಾತ್ಮಕವಾದ ವಾಕ್ಯಗಳಿಂದ ಕೂಡಿದ ಕಾವ್ಯ
ಎಲ್ಲರ ಮನವನ್ನು ಮುದಗೊಳಿಸುತ್ತವೆ ಮತ್ತು ಹದಗೊಳಿಸುತ್ತವೆ. ಅಂಥ ಕಾವ್ಯಗಳು ಎಲ್ಲ ಭಾಷೆಗಳಿಗೆ
ತರ್ಜುಮೆಯಾಗುತ್ತವೆ. ಶೇಕಸ್ಪಿಯರ್, ಜಾನ್ ಕೀಟ್ಸ್ ಕಾಳಿದಾಸ, ವ್ಯಾಸ, ವಾಲ್ಮೀಕಿ, ರವೀಂದ್ರನಾಥ ಠಾಕೂರು, ಡಿ.ವಿ.ಜಿ. ಕನಕದಾಸ, ಸರ್ವಜ್ಞ, ಕಬೀರದಾಸ, ಖಲೀಲ್ ಗಿಬ್ರಾನ್, ಅರವಿಂದ ಘೋಷ್, ಮುಂತಾದವರ ಕಾವ್ಯಗಳು ಮನುಕುಲಕ್ಕೆ ದೊರೆತ ಅಮೂಲ್ಯ ರತ್ನಗಳು. ಅಂಥವರ ಕಾವ್ಯಗಳನ್ನೋದಿ ಬಾಳು ಬೆಳಗಿಸಿಕೊಳ್ಳಬೇಕು.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990