ಭಕ್ತಿಯಿಂದಲಿ ಶಬರಿ ಶ್ರೀರಾಮನಾಗಮನ
ನಿತ್ಯ ಕಾದಳು ಹಲವು ಸಂವತ್ಸರ
ಮುಂದೊಂದು ದಿನ ದೇವನೊಲಿದು ಬರುವುದು ಖಚಿತ
ಶ್ರದ್ಧೆಯಲಿ ಶಕ್ತಿಯಿದೆ – ಎಮ್ಮೆತಮ್ಮ
ಶಬ್ಧಾರ್ಥ
ಸಂವತ್ಸರ =ವರುಷ, ವರ್ಷ. ಶ್ರದ್ಧೆ = ಭಕ್ತಿ, ನಂಬುಗೆ, ಬಯಕೆ
ತಾತ್ಪರ್ಯ
ಶಬರಿ ಬೇಡ ಜನಾಂಗದ ನಿಷಾಧ ಬುಡಕಟ್ಟಿಗೆ ಸೇರಿದ ಒಬ್ಬ
ಮಹಿಳೆ.ಆಕೆಯ ಮದುವೆಯ ಹಿಂದಿನ ದಿನ ನೂರಾರು
ಕುರಿಗಳನ್ನು ಬಲಿಕೊಡಲು ತಂದೆ ಏರ್ಪಡಿಸುತ್ತಾನೆ. ಆಗ ಆಕೆಗೆ ಸಂಕಟವುಂಟಾಗಿ ಮದುವೆಯ ದಿನ ಜಿಗುಪ್ಸೆಯಿಂದ ಮನೆ ಬಿಟ್ಟು ಅಧ್ಯಾತ್ಮ ಸಾಧನೆಗೆ ಹೊರಡುತ್ತಾಳೆ. ಋಷ್ಯಮೂಕದಲ್ಲಿ ಇದ್ದ ಮಾತಂಗ ಮಹಿರ್ಷಿಯ ಬಳಿಗೆ ಬಂದು ಅವರ ಸೇವೆ ಮಾಡುತ್ತಾಳೆ. ಅವರ ಸೇವೆಯನ್ನು ಮುದುಕಿಯಾಗುವವರೆಗೆ ಮಾಡುತ್ತಾಳೆ. ಆಗ ಆ ಗುರುವಿನ ಅಂತ್ಯಕಾಲ ಬಂದಾಗ ಗುರುವು ನಿನ್ನ ಉದ್ಧರಿಸಲು ಶ್ರೀರಾಮ ಬರುತ್ತಾನೆ ಎಂದು ಹೇಳಿ ಸಮಾಧಿ ಹೊಂದುತ್ತಾನೆ. ಅದಕ್ಕಾಗಿ ರಾಮನ ಆಗಮನವನ್ನು ದಿನ ನಿತ್ಯ ಇಂದು ಬರುತ್ತಾನೆ ಎಂದು ಭಾವಿಸುತ್ತ ಹಲವಾರು ವರ್ಷ ಕಾಯುತ್ತಾಳೆ. ಆತನಿಗಾಗಿ ದಿನನಿತ್ಯ ನಿಷ್ಠೆಯಿಂದ ಹಣ್ಣು ತಿಂದು ಸಿಹಿಯಾದುದನ್ನು ತೆಗೆದಿರಿಸುತ್ತಾಳೆ.ಕೊನೆಗೆ ಒಂದು ದಿನ ಶ್ರೀರಾಮ ಲಕ್ಷ್ಮಣನೊಂದಿಗೆ ಅಲ್ಲಿಗೆ ಬರುತ್ತಾನೆ. ಅವರ ದರ್ಶನ ಪಡೆದು ಶಬರಿ ತನ್ನ ಗುಡಿಸಲಿಗೆ ಕರೆದೊಯ್ದು ಉಪಚರಿಸುತ್ತಾಳೆ. ಕಚ್ಚಿದ ಎಂಜಲು ಬಾರೆಹಣ್ಣು ಭಕ್ತಿಯಿಂದ
ಕೊಟ್ಟರೆ ತಿಂದು ತೃಪ್ತಿಹೊಂದಿ ಅವಳಿಗೆ ಆಶೀರ್ವದಿಸುತ್ತಾನೆ.
ಹೀಗೆ ನಾವು ದೇವನಿಗಾಗಿ ದಿನನಿತ್ಯ ಶ್ರದ್ಧೆಭಕ್ತಿಯಿಂದ ಕಾದರೆ ಒಂದಿಲ್ಲ ಒಂದು ದಿನ ಖಂಡಿತ ಒಲಿಯುತ್ತಾನೆ. ಭಕ್ತಿಶ್ರದ್ಧೆಯಲ್ಲಿ ದೇವನನ್ನು ಎಳೆದು ತರುವ ಅಂಥ ಶಕ್ತಿಯಿದೆ.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990