ಬೇಕುಬೇಕೆಂಬುವ ಬಾವಿಜಲ ಬತ್ತುವುದು
ಸಾಕೆಂಬ ಸಾಗರವು ಬತ್ತಬಹುದೆ ?
ಬೇಕೆನಲು ಭಿಕ್ಷುಕನು ಸಾಕೆನಲು ಸಿರಿವಂತ
ಸಂತೃಪ್ತಿಯಿಂದ ಸುಖ- ಎಮ್ಮೆತಮ್ಮ.
ಶಬ್ಧಾರ್ಥ
ಸಾಗರ = ಸಮುದ್ರ.
ತಾತ್ಪರ್ಯ
ಬಾವಿಯ ನೀರು ಮಳೆಗಾಲದಲ್ಲಿ ಮಾತ್ರ ತುಂಬಿರುತ್ತದೆ.ಆದರೆ ಬೇಸಿಗೆಕಾಲ ಬಂದಾಗ ಬಳಸಿದಂತೆಲ್ಲ ನೀರು ಖಾಲಿಯಾಗಿ ಬತ್ತಿಹೋಗುವ ಸಂಭವವಿರುತ್ತದೆ. ಅದು ಸದಾ ಮಳೆಯನ್ನು ಅವಲಂಬಿಸಿರುತ್ತದೆ. ಅದಕ್ಕೆ ಅದು ಮಳೆಗೆ ನೀರು ಬೇಕು ಬೇಕು ಎಂದು ಬಯಸುತ್ತದೆ. ಆದರೆ ಸಮುದ್ರಕ್ಕೆ ಎಲ್ಲಾ ನದಿಗಳಿಂದ ನೀರು ಬರುತ್ತಿರುತ್ತದೆ. ನೀರು ಎಂದಿಗೂ ಬತ್ತಿಹೋಗುವುದಿಲ್ಲ. ಸಾಕಪ್ಪೋ ಸಾಕು ಎಂದು ಸಾಗರ ಭೋರ್ಗರೆದರು ನೀರು ಬರುತ್ತಲೇ ಇರುತ್ತದೆ. ಹಾಗೆ ಮನುಷ್ಯ ದುರಾಸೆಯಿಂದ ಸಂಪತ್ತು ಬೇಕೆಂದುಬೇಡುತ್ತಾನೆ. ಭಿಕ್ಷುಕ ಮನೆಮನೆಗೆ ಹೋಗಿ ತಿರುಪೆ ಬೇಡಿದರೆ ಜನರು ಬೈಯ್ದು ನೀಡದೆ ಕಳಿಸುವವರೆ ಹೆಚ್ಚು. ಸಂಪತ್ತಿದ್ದರೂ ಇದ್ದುದರಲ್ಲಿ ತೃಪ್ತಿಪಡದೆ ಮತ್ತೆ ಬಯಸುವವನು ತಿರುಕನಿಗಿಂತ ಕೀಳು. ಧನಿಕ ಇದ್ದ ಸಂಪತ್ತನ್ನು ಉಪಯೋಗುಸುವುದಲ್ಲದೆ ಇತರರಿಗೆ
ದಾನ ಮಾಡಿ ಸದುಪಯೋಗ ಮಾಡುತ್ತಾನೆ.
ಸಂತೃಪ್ತಿ ಇದ್ದವನೆ ನಿಜವಾಗಿ ಸಿರಿವಂತ. ಏಕೆಂದರೆ ಯಾರಾದರು ಅವನಿಗೆ ಕೊಡಲು ಬಂದರೆ ಬೇಡ ಎನ್ನುತ್ತಾನೆ. ಬೇಡ ಅಂದಷ್ಟು ಜನರು ಅವನಿಗೆ ಒತ್ತಾಯ ಮಾಡಿ ಕೊಡಲುಹೋಗುತ್ತಾರೆ. ಏಕೆಂದರೆ ಆತನ ಭಾವ ಶುದ್ಧಿಯಿದೆ. ಭಾವ ಶುದ್ಧಿಯಿದ್ದವನಿಗೆ ಭಾಗ್ಯಕ್ಕೆ
ಕೊರತೆಯಿರುವುದಿಲ್ಲ. ಸಂತೃಪ್ತಿಪಡುವುವವನೆ ಸಿರಿವಂತ.
ಅವನೆ ನಿಜವಾದ ಸುಖಿ. ಬೇಡುವುವವನೆ ದುಃಖಿ.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990