ಮಾಳಿಗೆಯನೇರಲಿಕೆ ಬೇಕೊಂದು ನಿಚ್ಚಣಿಕೆ
ಮತ್ತೇಕೆ ಮೇಲೇರಿ ನಿಂತಮೇಲೆ ?
ತನ್ನನರಿಯುವತನಕ ಬೇಕು ಶಾಸ್ತ್ರಾಧ್ಯಯನ
ಅರಿತಮೇಲಿನ್ನೇಕೆ ? – ಎಮ್ಮೆತಮ್ಮ
ಶಬ್ಧಾರ್ಥ
ಶಾಸ್ತ್ರಾಧ್ಯಯನ = ಧಾರ್ಮಿಕ ಗ್ರಂಥಗಳ ಓದುವಿಕೆ
ತಾತ್ಪರ್ಯ
ಮನೆಯ ಮಾಳಿಗೆ ಮೇಲೆ ಹೋಗಬೇಕಾದರೆ ಒಂದು ಏಣಿ
ಬೇಕಾಗುತ್ತದೆ. ಅದರ ಸಹಾಯದಿಂದ ಮೇಲಕ್ಕೆ ಏರಿದ ಮೇಲೆ ಅದರ ಅವಶ್ಯಕತೆ ಇರುವುದಿಲ್ಲ. ಅಲ್ಲಿರುವ ಆಕಾಶ ಮೋಡ ಚಂದ್ರ ಚುಕ್ಕಿಗಳನ್ನು ನೋಡಿ ನಲಿಯಬೇಕು.ಹಾಗೆ ಸುತ್ತಮುತ್ತ ಕಾಣುವ ಬೆಟ್ಟಗುಡ್ಡ., ನದಿಸರೋವರ, ಗಿಡಮರ ತುಂಬಿದ ಅರಣ್ಯ ನೋಡಿ ಸಂತೋಷಪಡಬೇಕು .ಅದು ಬಿಟ್ಟು ಏಣಿಯ ಬಗ್ಗೆ ಚಿಂತಿಸಬಾರದು.ಹಾಗೆ ಒಳಗಿನ ತನ್ನ ಅರಿವು ತಿಳಿಯುವತನಕ ಶಾಸ್ತ್ರಜ್ಞಾನ ಬೇಕಾಗುತ್ತದೆ. ಅವುಗಳನ್ನು ಓದುತ್ತ ಆಚಾರ ವಿಚಾರಗಳನ್ನು ತಿಳಿದು ಅನುಸರಿಸಿ ನಡೆಯಬೇಕಾಗುತ್ತದೆ. ಹಿಂದಿನ ಮಹಾತ್ಮರು ತೋರಿದ ದಾರಿಯಲ್ಲಿ ಹೋಗಬೇಕಾದರೆ ಅವರು ಬರೆದಿಟ್ಟ
ಶಾಸ್ತ್ರಗಳನ್ನು ಮನನ ಮಾಡಬೇಕು. ತನ್ನರಿವು ತನಗಾದ
ಮೇಲೆ ಅವುಗಳ ಅವಶ್ಯಕತೆ ಇರುವುದಿಲ್ಲ. ಬಳ್ಳಾರಿಯ ಅಲ್ಲೀಪುರದ ಮಹಾದೇವತಾತ ಕಾಶಿಯಲ್ಲಿದ್ದಾಗ ಜ್ಞಾನೋದಯವಾಯಿತು. ಆಗ ಅವರ ಬಳಿಯಿದ್ದ ಶಾಸ್ತ್ರಗ್ರಂಥಗಳ ಕಟ್ಟನ್ನು ಗಂಗಾನದಿಗೆ ಎಸೆದುಬಿಟ್ಟರು.
ಜ್ಞಾನ ಉಂಟಾದ ಮೇಲೆ ಪರಮಾನಂದ ಸುಖದಲ್ಲಿ ತೇಲಾಡಬೇಕು.ಆಗ ಜ್ಞಾನಿ ಹೇಳಿದ ಮಾತೆಲ್ಲ
ವೇದವಾಗುತ್ತದೆ.ಅರಿತ ಮೇಲೆ ಗೀತೆ ಒಂದು ಮಾತಿನೊಳಗು
ಎಂದು ಅಲ್ಲಮಪ್ರಭುಗಳು ಹೇಳುತ್ತಾರೆ.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990