ತನ್ನಮುಖದಲಿಹ ರೂಪ ಸೌಂದರ್ಯ ನೋಡಲಿಕೆ
ಕನ್ನಡಿಯ ತುಣುಕೊಂದು ಬೇಕೆಬೇಕು
ತನ್ನಲ್ಲಿ ತುಂಬಿರುವ ತನ್ಮಾತ್ಮ ದರುಶನಕೆ
ಕುರುಹು ಬೇಕಾಗುವುದು – ಎಮ್ಮೆತಮ್ಮ
ಶಬ್ಧಾರ್ಥ
ಕುರುಹು = ಗುರುತು
ತಾತ್ಪರ್ಯ
ನಮ್ಮ ಮುಖ ನೋಡಿಕೊಳ್ಳಲು ಯಾರಿಗೆ ಸಾಧ್ಯವಾಗದು.
ಅದಕ್ಕೆ ಕೈಯಲ್ಲಿ ಒಂದು ಕನ್ನಡಿಯ ತುಣುಕು ಬೇಕೇಬೇಕು.
ಅದರಲ್ಲಿ ನಮ್ಮ ಮುಖದ ಮೇಲಿರುವ ಕಲೆಗುರುತುಗಳನ್ನು
ಕಂಡು ಸರಿಪಡಿಸಿಕೊಂಡು ಚಂದವಾಗಿ ಕಾಣಲು ಅಲಂಕಾರ
ಮಾಡಿಕೊಳ್ಳಬಹುದು. ತಿದ್ದಿ ತೀಡಿಕೊಂಡು ಸುಂದರವಾಗಿ ಕಾಣುವಂತೆ ಮಾಡಿಕೊಳ್ಳಬಹುದು. ಹಾಗೆ ನಮ್ಮ ಆತ್ಮವನ್ನು
ನೋಡಲು ಸಾಧ್ಯವಾಗುವುದಿಲ್ಲ.ಅದಕ್ಕೆ ಮೂರ್ತಿಯಾಗಲಿ
ಅಥವಾ ಲಿಂಗವಾಗಲಿ ನೋಡುತ್ತ ನಮ್ಮನ್ನು ನಾವು ಅಂದರೆ
ಪರಮಾತ್ಮನನ್ನು ಕಾಣಬಹುದು. ನಮ್ಮಲ್ಲಿರುವ ಗುಣದೋಷ
ಕಳೆದುಕೊಂಡು ದೇವನನ್ನು ಒಲಿಸಿಕೊಳ್ಳಬಹುದು. ಬರಿದೆ
ನಿರ್ಗುಣೋಪಾಸನೆಯಿಂದ ದೇವರನ್ನು ಒಲಿಸಲು ಕಷ್ಟ.
ಅದಕೆ ದೇವರ ಕುರುಹು ಹಿಡಿದುಕೊಂಡು ಸುಗುಣೋಪಾಸನೆ
ಮಾಡಿ ಸುಲಭವಾಗಿ ಕಾಣಬಹುದು. ಅರಿವಿಗಾಗಿ ಕುರುಹು
ಮಾತ್ರ. ಅದುವೆ ದೇವರಲ್ಲ. ನಮ್ಮರಿವೆ ದೇವರು. ಅದಕಾಗಿ
ಅಲ್ಲಮ ಪ್ರಭುಗಳು ಅರಿವೆ ಜ್ಯೋತಿರ್ಲಿಂಗ ಎಂದು ಬಿಡಿಸಿ
ಹೇಳಿದ್ದಾರೆ. ಮಗು ನಡಿಗೆ ಕಲಿಯುವವರೆಗೆ ದೂಕುಬಂಡಿ
ಹಿಡಿದು ಚಲಿಸುತ್ತದೆ. ನಡೆಯುವುದನ್ನು ಕಲಿತ ಮೇಲೆ
ದೂಕಬಂಡಿ ಬೇಕಾಗಿಲ್ಲ. ಸಾಧನೆಗೆ ಮೊದಲು ಉಪಕರಣ
ಬೇಕಾಗುವಂತೆ ಮೂರ್ತಿ ಅಥವಾ ಲಿಂಗ ಒಂದು ಉಪಕರಣ. ಕುರುಹಿಲ್ಲದೆ ಅರುಹು ಅಸಾಧ್ಯ. ಅದಕೆ ಕುರುಹು ಬೇಕು.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990