HomeUncategorizedಎಮ್ಮೆತಮ್ಮನ ಕಗ್ಗದ ತಾತ್ಪರ್ಯ

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 

ಸ್ವರ್ಗನರಕಗಳೆಂಬ ಲೋಕಂಗಳಿಹವೇನು?
ಮೇಲಿಲ್ಲ ಕೆಳಗಿಲ್ಲ ಎಲ್ಲುಯಿಲ್ಲ
ನೋಡಿಬಂದವರಿಲ್ಲ ವರದಿ ತಂದವರಿಲ್ಲ
ಅದರಿಂದ ಬಾಳ್ಗೇನು ? – ಎಮ್ಮೆತಮ್ಮ

ಶಬ್ಧಾರ್ಥ
ವರದಿ = ಸುದ್ದಿ

ತಾತ್ಪರ್ಯ
ತ್ರಿಲೋಕಗಳಿವೆ ಎಂದು ಹೇಳುತ್ತಾರೆ. ಅವೆ ಸ್ವರ್ಗ‌ ಮರ್ತ್ಯ
ಪಾತಾಳ ಅಥವಾ ನರಕ. ಸದ್ಯ‌ ನಮಗೆ ಮರ್ತ್ಯವಿದೆ ಎಂದು
ತಿಳಿದುಬರುತ್ತದೆ. ಏಕೆಂದರೆ ಅದು‌ ಕಣ್ಣಿಗೆ ಗೋಚರವಾಗುತ್ತದೆ ಮತ್ತು ಅದರ‌ ಮೇಲೆ ನಾವು ಜೀವಿಸುತ್ತೇವೆ. ಆದರೆ ಸ್ವರ್ಗ
ನರಕ ಎಂಬುವು ನಮಗೆ ಕಂಡುಬರುವುದಿಲ್ಲ. ಅಲ್ಲಿಗೆ ನಾವು
ಸತ್ತ ನಂತರ ಹೋಗುತ್ತದೆಯೆಂದು‌ ಹೇಳುತ್ತಾರೆ. ಅಂಥ ಲೋಕಗಳಿಗೆ ಹೋದವರು ಹೊರಳಿ ಬಂದು ನಮಗೆ ಇಂಥ
ಲೋಕಗಳಿವೆ ಎಂದು ಸುದ್ದಿ ತಂದು ಹೇಳಿದರೆ ನಂಬಬಹುದು.
ಅವೆಲ್ಲ ಕಪೋಲ ಕಲ್ಪಿತವೆನ್ನಬಹುದು. ಒಂದು ವೇಳೆ ಇದ್ದರೂ
ಇರಬಹುದು. ಆ‌ ಲೋಕಗಳಿಂದ ನಮಗೇನು ಉಪಯೋಗ.
ಈ‌ ಭೂಮಿಯಲ್ಲಿ ಸಂತೋಷವಾಗಿ ಬಾಳಿದರೆ ಸ್ವರ್ಗ.ಅದಕ್ಕೆ
ನಕ್ಕರದೇ ಸ್ವರ್ಗ ಎಂದು ಹೇಳುತ್ತಾರೆ. ಮತ್ತೆ ದುಃಖದಿಂದ
ಬಾಳಿದರೆ ನರಕ. ಅತ್ತರದೇ ನರಕವೆನ್ನಬಹುದು. ಅದನ್ನೆ
ಬಸವಣ್ಣನವರು ಅಯ್ಯಾ ಎಂದರೆ ಸ್ವರ್ಗ ಎಲವೋ ಎಂದರೆ
ನರಕ. ಆಚಾರವೇ ಸ್ವರ್ಗ ಅನಾಚಾರವೇ ನರಕ ಎಂದು ಹೇಳಿ
ಹೇಗೆ ನುಡಿಯಬೇಕು ಮತ್ತು ಹೇಗೆ ನಡೆಯಬೇಕೆಂದು ತಮ್ಮ
ವಚನದಲ್ಲಿ ತಿಳಿಸಿದ್ದಾರೆ.

ಈ ಭೂಮಿಯಲ್ಲಿ ಸುಜ್ಞಾನಿಯಾಗಿ ಜೀವಿಸಿ ಸ್ವರ್ಗಸುಖವನ್ನು ಪಡೆಯಬೇಕು. ಅಜ್ಞಾನ ಆಡಂಬರ ಅಹಂಕಾರ ಬಿಟ್ಟು ಬದುಕಿ ನರಕಯಾತನೆ ತಪ್ಪಿಸಿಕೊಳ್ಳಬೇಕು.
ಸುಖಸುಮ್ಮಾನವೆ ಸ್ವರ್ಗ, ದುಃಖ ದುಮ್ಮಾನವೆ ನರಕ.

ರಚನೆ ಮತ್ತು ವಿವರಣೆ ‌‌ ‌‌‌ ಎನ್.ಶರಣಪ್ಪ‌ ಮೆಟ್ರಿ
ಮೊ. 9449030990

RELATED ARTICLES

Most Popular

error: Content is protected !!
Join WhatsApp Group