ಚಿಕ್ಕದೊಂದಿರುವೆ ತಾ ಸಕ್ಕರೆಯ ವಾಸನೆಯ
ಹಿಡಿದು ಚಲಿಸುವುದದರ ಪತ್ತೆಗಾಗಿ
ಹಾಗೆ ನೀನೊಂದು ಸವಿನಾಮವನು ಹಿಡಿದು ಪಡೆ
ಆತ್ಮಸಾಕ್ಷಾತ್ಕಾರ – ಎಮ್ಮೆತಮ್ಮ
ಶಬ್ಧಾರ್ಥ
ಪತ್ತೆ = ಗುರುತು, ವಿಳಾಸ, ಹುಡುಕುವಿಕೆ
ತಾತ್ಪರ್ಯ
ಅತೀ ಸಣ್ಣದಾಗಿರುವ ಇರುವೆಗೆ ಎಂಥ ಅದ್ಭುತ ಗುಣವಿದೆ.
ಸಿಹಿ ಪದಾರ್ಥ ಎಷ್ಟೋ ದೂರದಲ್ಲಿದ್ದರು ಕೂಡ ಅದರ ವಾಸನೆ ಹಿಡಿದುಕೊಂಡು ಬಂದು ತಿನ್ನುತ್ತದೆ. ಸಿಹಿಯ ವಾಸನೆಯನ್ನು ಗ್ರಹಿಸುವ ಶಕ್ತಿ ಸಣ್ಣ ಇರುವೆಗಿದೆ. ಅದನ್ನು ಮಡಿವಾಳ ಮಾಚಿದೇವ ಒಂದು ವಚನದಲ್ಲಿ ಹೇಳಿದ್ದಾನೆ.
“ವಾಯು ಗುಣವ ಸರ್ಪ ಬಲ್ಲುದು, ಮಧುರ ಗುಣವ ಇರುವೆ ಬಲ್ಲುದು,ಗೋತ್ರದ ಗುಣವ ಕಾಗೆ ಬಲ್ಲುದು, ವೇಳೆ ಗುಣವ ಕೋಳಿ ಬಲ್ಲುದು,ಇದು ಕಾರಣ ಮನುಷ್ಯ ಜನ್ಮದಲ್ಲಿ ಬಂದು ಶಿವಜ್ಞಾನ ಅರಿಯದಿದ್ದರೆ ಕಾಗೆ-ಕೋಳಿಗಳಿಗಿಂತ ಕರಕಷ್ಟ ಕಾಣಾ ಕಲಿ ದೇವರ ದೇವಾ” ಅಂಥ ಕ್ರಿಮಿಕೀಟಪಕ್ಷಿಗಳಿರುವ
ಸೂಕ್ಷ್ಮಜ್ಞಾನ ಮಾನವನಾದ ನಿನಗಿಲ್ಲದಿದ್ದರೆ ಹೇಗೆ. ಅದಕ್ಕೆ
ನೀನು ಶಿವ, ಹರಿ, ಅಂಬಾ, ಏಸು, ಬಸವ, ಬುದ್ದ, ರಾಮ, ಕೃಷ್ಣ, ಜಿನ, ಅಲ್ಲಾ, ಯಾವುದಾದರೊಂದು ಸವಿಯಾದ
ನಾಮವನ್ನು ಜಪಿಸುತ್ತ ದೇವರ ದರ್ಶನವನ್ನು ಮಾಡಿಕೊಳ್ಳು.
ನಾಮಜಪವೆಂದರೆ ಅನೇಕ ಯೋಚನೆಗಳನ್ನು ಬಿಟ್ಟು ಒಂದು
ಆಲೋಚನೆ ಮಾಡುವುದು. ಕೊನೆಗೆ ಅದನ್ನು ಬಿಟ್ಟರೆ ಅಜಪ
ಆಗಿ ಮನಸು ನಿಲ್ಲುತ್ತದೆ.
ಅದನ್ನೆ ಬಸವಣ್ಣ “ಕಂಗಳು ತುಂಬಿದ ಬಳಿಕ ನೋಡಲಿಲ್ಲ,ಕಿವಿಗಳು ತುಂಬಿದ ಬಳಿಕ ಕೇಳಲಿಲ್ಲ, ಕೈಗಳು ತುಂಬಿದ ಬಳಿಕ ಪೂಜಿಸಲಿಲ್ಲ,ಮನವು ತುಂಬಿದ ಬಳಿಕ ನೆನೆಯಲಿಲ್ಲ ಮಹಂತ ಕೂಡಲಸಂಗಮದೇವನ” ಎಂದಿದ್ದಾನೆ.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ ಮೊ. 9449030990