ಬರುವಪಾಯವನರಿತು ತನ್ನಿಂದ್ರಿಯಂಗಳನು
ಚಿಪ್ಪೊಳಗೆ ಸೆಳೆಕೊಳ್ಳುವಾಮೆಯಂತೆ
ಹೊರಜಗಕೆ ಹರಿದೋಡುವಿಂದ್ರಿಂಗಳ ನೀನು
ತಿರುಗಿಸೊಳಲೋಕಕ್ಕೆ – ಎಮ್ಮೆತಮ್ಮ
ಶಬ್ಧಾರ್ಥ
ಚಿಪ್ಪು = ಆಮೆಯ ಹೊರಕವಚ
ತಾತ್ಪರ್ಯ
ಭಗವದ್ಗೀತೆಯಲ್ಲಿ ಕೃಷ್ಣನು ಅರ್ಜುನನಿಗೆ ಹೀಗೆ ಹೇಳುತ್ತಾನೆ.
ಯದಾ ಸಂಹರತೇ ಛಾಯಂ ಕೂರ್ಮೋ ಅಂಗನೀವ ಸರ್ವಶಃ
ಇಂದ್ರಿಯಾಣೀಂದ್ರಿಯಾರ್ಥೇಭ್ಯಸ್ ತಸ್ಯ ಪ್ರಜ್ಞಾ ಪ್ರತಿಷ್ಠಿತಃ
ಯೋಗಿಯು, ಆಮೆಯು ತನ್ನ ಅಂಗಗಳನ್ನು ತನ್ನ ಚಿಪ್ಪಿನೊಳಗೆ ಎಳೆದುಕೊಳ್ಳುವಂತೆ, ಇಂದ್ರಿಯ ವಸ್ತುಗಳಿಂದ ಎಲ್ಲಾ ಇಂದ್ರಿಯಗಳನ್ನು ಹಿಂತೆಗೆದುಕೊಂಡಾಗ, ಅವನ ಬುದ್ಧಿವಂತಿಕೆಯು ದೃಢವಾಗಿ ಸ್ಥಿರವಾಗಿರುತ್ತದೆ. ಹೇಗೆ ಆಮೆ
ಮುಂದೆ ತನಗೆ ಬರುವ ಅಪಾಯವನ್ನು ಅರಿತು ತನ್ನ ತಲೆ, ಕಾಲು , ಬಾಲವನ್ನು ಚಿಪ್ಪಿನೊಳಗೆ ಸೆಳೆದುಕೊಳ್ಳುತ್ತದೆ.
ಹಾಗೆ ನಮ್ಮ ಇಂದ್ರಿಯಗಳನ್ನು ಒಳಗೆ ಸೆಳೆದುಕೊಳ್ಳಬೇಕು.
ಹಾಗೆ ಮಾಡುವುದರಿಂದ ಮನಸ್ಸು ನಿಂತು ಯೋಗ
ಸಿದ್ಧಿಸುತ್ತದೆ. ಆಮೆ ತನ್ನ ಉಸಿರಾಟವನ್ನು ಮಿತಗೊಳಿಸುತ್ತದೆ. ಅದು ಒಂದು ನಿಮಿಷಕ್ಕೆ ೪ ಸಲ ಉಸಿರಾಡುತ್ತದೆ. ಇದರಿಂದ
ಆಮೆ ಮುನ್ನೂರು ವರ್ಷಗಳ ಕಾಲ ಬದುಕುತ್ತದೆ. ಅದಕ್ಕಾಗಿ
ಗುಡಿಯ ಮುಂಭಾಗದಲ್ಲಿ ಆಮೆಯನ್ನು ಕೆತ್ತಿ ಇಟ್ಟಿರುತ್ತಾರೆ.
ಆ ಆಮೆಯನ್ನು ನೋಡಿ ನಮ್ಮ ಇಂದ್ರಿಯಗಳನ್ನು ನಿಗ್ರಹಿಸಿ ಸಾಧಿಸಬೇಕು ಎಂಬುವ ಸಂದೇಶ. ಆಮೆಯಂತೆ ಯೋಗಿ ಪ್ರಾಣಾಯಾಮ ಮಾಡಿ ಆಯುಷ್ಯ ಹೆಚ್ಚಿಸಿಕೊಂಡು
ದೀರ್ಘಕಾಲ ಆನಂದದಿಂದ ಬದುಕುತ್ತಾನೆ.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990