ಕೈಮುಗಿದು ಗುಡಿಸುತ್ತ ಸುತ್ತಿಬರುವುದು ಸುಲಭ
ಕರಕಷ್ಟ ಮನಹಿಡಿದು ನಿಲ್ಲಿಸುವುದು
ಪೂಜಿಸುವುದು ಸುಲಭ ಧ್ಯಾನಿಸುವುದತಿಕಷ್ಟ
ವರಯೋಗಿಗಿದು ಸರಳ – ಎಮ್ಮೆತಮ್ಮ
ಶಬ್ಧಾರ್ಥ
ಕರಕಷ್ಟ = ಬಹಳ ಕಷ್ಟ. ವರಯೋಗಿ = ಶ್ರೇಷ್ಠ ಯೋಗಿ
ತಾತ್ಪರ್ಯ
ಚಿತ್ತವಿಲ್ಲದೆ ಗುಡಿಯ ಸುತ್ತಿದಡೆ ಫಲವೇನು| ಎತ್ತು ಗಾಣವನು
ಹೊತ್ತು ತಾ ನಿತ್ಯದಿ | ಸುತ್ತಿಬಂದಂತೆ ಸರ್ವಜ್ಞ |ಎಂದು ಕವಿ
ಸರ್ವಜ್ಞ ಹೇಳಿದ್ದಾನೆ. ನಾವು ಮನಸ್ಸನ್ನು ಎಲ್ಲಿಯೋ ಇಟ್ಟು ದೇವರನ್ನು ನೆನೆಯದೆ ಸುಮ್ಮನೆ ದೇವರಗುಡಿ ಸುತ್ತಿದರೆ ಏನು ಉಪಯೋಗ. ಗಾಣಕ್ಕೆ ಕಟ್ಟಿದ ಎತ್ತು ಮಾಲಕನ ಭಯಕ್ಕೆ
ಗಾಣವನು ಹೊತ್ತು ಸುತ್ತುವಂತೆ ನಿರರ್ಥ ಎಂಬುದು ಕವಿಯ
ಅಭಿಪ್ರಾಯ. ದೇಹವನ್ನಷ್ಟೆ ಗುಡಿಯ ಸುತ್ತ ಸುತ್ತುವುದು ಬಲು ಸುಲಭ. ಆದರೆ ಮನಸ್ಸನ್ನು ಏಕಾಗ್ರಗೊಳಿಸಿ ನಾಮಸ್ಮರಣೆ ಮಾಡುವುದು ಕಷ್ಟ. ಕೈಮುಗಿಯುವುದು ಎಂದರೆ ಅದರ ಅರ್ಥ ನಮ್ಮ ಹತ್ತು ಇಂದ್ರಿಯಗಳನ್ನು ನಿಗ್ರಹಿಸುವುದು. ದೇವರ ಮೂರ್ತಿಯನ್ನು ನೀರಾಕಿ ಅಭಿಷೇಕ ಮಾಡಿ ಭಸ್ಮಗಂಧ ಲೇಪಿಸಿ ಧೂಪದೀಪ ಹಚ್ಚಿ ಹೂಪತ್ರಿ ಏರಿಸಿ ನೈವೇದ್ಯ ಮಾಡಿ ಕೈಮುಗಿಯುವುದು ಸುಲಭದ ಕೆಲಸ. ಆದರೆ ಕೊನೆಗೆ ಆ ದೇವನ ಧ್ಯಾನದಲ್ಲಿ ಕೂಡುವುದಿದೆಯಲ್ಲ ಕಷ್ಟದ ಕೆಲಸ. ಯೋಗಿಗಳು ಮಾತ್ರ ಸುಲಭವಾಗಿ ಮನಸ್ಸನ್ನು ದೇವರಲ್ಲಿ ನಿಲ್ಲಿಸಿ ಪರಮಾನಂದದಲ್ಲಿರುತ್ತಾರೆ. ಪೂಜೆಯ ಮೂಲ ಉದ್ದೇಶ ನಾವು ಪೂಜಿ ಆಗುವುದು ಅಂದರೆ ಮನಸು ಶೂನ್ಯ ಮಾಡುವುದು. ಹರಿದಾಡುವ ಆಲೋಚಿಸುವ ಮನಸ್ಸನ್ನು ನಿಲ್ಲಿಸಿದರೆ ವಿಶ್ವಪ್ರಾಣಶಕ್ತಿ ನಮ್ಮೊಳಗೆ ಪ್ರವೇಶಿಸುತ್ತದೆ. ಅದರಿಂದ ನಮಗೆ ಆನಂದ ಆರೋಗ್ಯ ಲಭಿಸುತ್ತದೆ.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990