ನಾಲ್ಕು ಗೋಡೆಯ ಬಿಟ್ಟು ಕೋಣೆಯಿಂದಿತ್ತ ಬಾ
ತಂಗಾಳಿ ಬೀಸುತಿದೆ ಬಯಲಿನಲ್ಲಿ
ಎಲ್ಲಕಡೆ ಸಮನಾಗಿ ಸೂಸುತಿದೆ ಶಶಿಕಿರಣ
ಮೇಲುಕೀಳುಗಳಿಲ್ಲ – ಎಮ್ಮೆತಮ್ಮ
ಶಬ್ಧಾರ್ಥ
ಶಶಿಕಿರಣ = ಬೆಳದಿಂಗಳು
ತಾತ್ಪರ್ಯ
ಸಮಾಜದಲ್ಲಿಯ ಜಾತಿ,ಮತ, ವರ್ಗ,ವರ್ಣವೆಂಬ ನಾಲ್ಕು
ಗೋಡೆಯಿಂದಾದ ಸಂಕುಚಿತ ಭಾವನೆಯ ಕೋಣೆಯಿಂದ
ಹೊರಗೆಬಂದುಬಿಡು. ಸಂತೋಷವಾದ ಸ್ವಾತಂತ್ರದ ತಂಪು
ಗಾಳಿ ಬಯಲಿನಲ್ಲಿ ಬೀಸುತ್ತಿದೆ. ಕತ್ತಲೆಯ ಕೋಣೆಯಲ್ಲಿ
ಕೂಡುವುದಕಿಂತ ಹೊರಗಡೆ ಎಲ್ಲರಿಗೆ ಸಮನಾಗಿ ಸೂಸುವ ಚಂದ್ರನ ಬೆಳದಿಂಗಳಲ್ಲಿ ಕೂತು ಆನಂದ ಅನುಭವಿಸು. ತಂಗಾಳಿ ಮತ್ತು ಬೆಳದಿಂಗಳು ಯಾವ ತಾರತಮ್ಯ ಮಾಡದೆ ಎಲ್ಲರಿಗೆ ಸಮನಾಗಿ ಸೂಸುತ್ತಿವೆ. ನಡೆವುದೊಂದೆ ಭೂಮಿ ಕುಡಿವುದೊಂದೆ ನೀರು| ಸುಡುವುದೊಂದಗ್ನಿ ಇರುತಿರಲು
ಕುಲಗೋತ್ರ | ನಡುವೆ ಎತ್ತಣದು ಸರ್ವಜ್ಞ| ಪಂಚ
ಭೂತಗಳಲ್ಲಿ ಇಲ್ಲದ ಕುಲಜಾತಿ ಮನುಷ್ಯರಲ್ಲಿ ಏಕೆ ಎಂದು ಕವಿ ಸರ್ವಜ್ಞ ಪ್ರಶ್ನಿಸುತ್ತಾನೆ. ಮಾನವರೆಲ್ಲರು ಸಮಾನರು ಎಂಬುದು ಸರ್ವಜ್ಞನ ಅಭಿಪ್ರಾಯ. ಆದಕಾರಣ ಯಾವ ಜಾತಿ ಮತ ವರ್ಗ ವರ್ಣಗಳನ್ನು ಮೇಲುಕೀಳು ಎಂದು ಎಣಿಸದೆ ಎಲ್ಲರನ್ನು ಗೌರವದಿಂದ ಕಾಣಬೇಕು. ಅಂಥ ಗೋಡೆಗಳ ಮಧ್ಯದಲ್ಲಿ ಇರದೆ ಹೊರಗೆ ಬಂದು ಎಲ್ಲರೊಂದಿಗೆ ಸೌಹಾರ್ದಯುತವಾಗಿ ಜೀವಿಸಬೇಕು. ಎಲ್ಲರು ನಮ್ಮವರು ಎಂಬ ವಿಶಾಲಗುಣ ಮತ್ತು ವಿಶಾಲ ಮನೋಭಾವನೆಗಳನ್ನು ಬೆಳೆಸಿಕೊಳ್ಳಬೇಕು. ಏನಾದರಾಗು ಮೊದಲು ಮಾನವನಾಗು ಎಂಬಕಾವ್ಯಾನಂದರ ವಾಣಿಯಂತೆ ನಿಜಮಾನವರಾಗಿ ಬದುಕಬೇಕು
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990